ಗ್ರಾಮೀಣಾಭಿವೃದ್ಧಿ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಗೆ 6 ತಿಂಗಳಿನಿಂದ ವೇತನವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಗಳಿಗೆ ಕಳೆದ ಆರು ತಿಂಗಳಿನಿಂದ ವೇತನ ನೀಡಿಲ್ಲ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೇ ತಿಂಗಳ ನಂತರ ಯಾವುದೇ ವೇತನ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕೋವಿಡ್ ಒಂದು ಮತ್ತು 2ನೇ ಅಲೆಯ ಲಾಕ್‍ಡೌನ್ ಸಮಯದಲ್ಲಿಯೂ ರಜೆಯಿಲ್ಲದೇ ಈ ಯೋಜನೆಯಡಿ ದುಡಿದ ಕ್ಷೇತ್ರ ಮಟ್ಟದ ಸಿಬ್ಬಂದಿಗೆ 6 ತಿಂಗಳಿನಿಂದ ಸಂಬಳ ನೀಡಿಲ್ಲ. ಇದರಿಂದ ಹೊರಗುತ್ತಿಗೆ ಸಿಬ್ಬಂದಿಯ ಕುಟುಂಬದ ನಿರ್ವಹಣೆಗೂ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಬೆಂಗಳೂರಿನ ಖಾಸಗಿ ಹೊರಗುತ್ತಿಗೆ ಸಂಸ್ಥೆಯ ಮೂಲಕ ಈ ಸಿಬ್ಬಂದಿಯ ವೇತನ ಪಾವತಿಯಾಗಬೇಕಿದ್ದು, ಕಳೆದ 6 ತಿಂಗಳಿನ ವೇತನದ ಬಿಲ್ಲು ಚಿಕ್ಕಮಗಳೂರು ಜಿಪಂನಿಂದ ಈ ಹೊರಗುತ್ತಿಗೆ ಸಂಸ್ಥೆಗೂ ಪಾವತಿಯಾಗಿಲ್ಲ ಎಂಬ ಆರೋಪಗಳಿವೆ.

ಬಾಕಿ ಇರುವ ಮೊದಲ ತಿಂಗಳುಗಳಲ್ಲಿ ಪಿಎಫ್, ಇಎಸ್‍ಐ ಹೊಂದಾಣಿಕೆ ಸರಿಯಿಲ್ಲ ವೆಂದು ವೇತನ ಪಾವತಿ ಮಾಡಿರಲಿಲ್ಲ. ಪರಿಣಾಮ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಅತ್ತ ಸಂಬಳವೂ ಇಲ್ಲ, ಇತ್ತ ಪಿಎಫ್, ಇಎಸ್‍ಐ ಸಮಸ್ಯೆಯೂ ಬಗೆಹರಿಯದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ತಿಂಗಳು ಈ ಯೋಜನೆಯಡಿ ವೇತನ ಪಾವತಿ ತಂತ್ರಾಂಶ ಎಂಡ್ ಟು ಎಂಡ್‍ನ ಸಮಸ್ಯೆಯೆಂದು ಯಾವುದೇ ವೇತನ ಪಾವತಿ ಮಾಡಲಿಲ್ಲ. ಪ್ರಸ್ತುತ ಎಂಡ್ ಟು ಎಂಡ್ ತಂತ್ರಾಂಶವನ್ನು ಬದಿಗಿಟ್ಟು, ಆರ್‍ಟಿಜಿಎಸ್ ಮೂಲಕ ವೇತನ ಪಾವತಿಸಲು ಸರ್ಕಾರದಿಂದ ಸೂಚನೆ ನೀಡಿದ್ದರೂ ಸಹ ಹೊರಗುತ್ತಿಗೆ ಸಂಸ್ಥೆ ವಾಣಿಜ್ಯ ತೆರಿಗೆ ಇಲಾಖೆಯ ಸಮಸ್ಯೆಯೆಂದು ವೇತನ ಪಾವತಿ ಮಾಡುತ್ತಿಲ್ಲ.

ಸರ್ಕಾರದಿಂದಲೇ ಟೆಂಡರ್ ಪ್ರಕ್ರಿಯೆ ಯಲ್ಲಿ ಆಯ್ಕೆಯಾಗಿ, ನವೀಕರಣ ಗೊಳ್ಳುತ್ತಿರುವ ಸಂಸ್ಥೆಯ ಮತ್ತು ಜಿಲ್ಲಾ ಪಂಚಾಯಿತಿಯ ಈ ವಿಳಂಬ ನೀತಿಗಳಿಂದ ಕೋವಿಡ್ ಸಮಯದಲ್ಲಿಯೂ ಯೋಜನೆ ಯನ್ನು ಜನರಿಗೆ ತಲುಪಿಸುವುದರಲ್ಲಿ ಶ್ರಮಿಸಿದ ಕ್ರೇತ್ರಮಟ್ಟದ ಸಿಬ್ಬಂದಿ ಮಾತ್ರ ವೇತನವಿಲ್ಲದೇ ಕಣ್ಣೀರಿಡುತ್ತಿದ್ದಾರೆ.

ಜಿಲ್ಲಾ ಪಂಚಾಯ್ತಿ ಮತ್ತು ಗುತ್ತಿಗೆ ಸಂಸ್ಥೆ ಈ ಸಿಬ್ಬಂದಿ ಬಗ್ಗೆ ಮಾನವೀಯತೆ ಮರೆತಂತೆ ವರ್ತಿಸುತ್ತಿವೆ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನಾದರೂ ನೆಪಗಳನ್ನು ಮುಂದೊಡ್ಡದೇ, ತಾಂತ್ರಿಕ ಸಮಸ್ಯೆ ಬಗೆಹರಿಸಿ ಕಾಲಕಾಲಕ್ಕೆ ಸರಿಯಾಗಿ ವೇತನ ನೀಡಬೇಕು. ತಕ್ಷಣವೇ ಬಾಕಿ ವೇತನ ಬಿಡುಗಡೆ ಮಾಡಿ ಸಿಬ್ಬಂದಿಯನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಆಗ್ರಹಿಸಲಾಗಿದೆ.

Facebook Comments

Sri Raghav

Admin