ಸೈಬೀರಿಯಾದ ಕಲ್ಲುಗಣಿಯಲ್ಲಿ ಬೆಂಕಿ, 52 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಮಾಸ್ಕೋ,ನ.26- ಸೈಬೀರಿಯಾದ ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 52 ಗಣಿ ಕಾರ್ಮಿಕರು ಮತ್ತು ಸಂರಕ್ಷಣಾ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ರಷ್ಯಾದ ವಾರ್ತಾ ಸಂಸ್ಥೆಗಳು ತಿಳಿಸಿವೆ. ಸಂರಕ್ಷಕರು ಗಣಿಯಲ್ಲಿ 14 ಶವಗಳನ್ನು ಪತ್ತೆ ಮಾಡಿದ್ದರು ಮತ್ತು ಬೆಂಕಿಯ ವಿಷಜ್ವಾಲೆಗಳು ಮತ್ತು ಸೋಟಕ ಮೀಥೇನ್ ಅನಿಲದ ಉತ್ಪತ್ತಿಯಿಂದಾಗಿ ನಾಪತ್ತೆಯಾಗಿದ್ದ 38 ಜನರ ಶೋಧಕಾಯಕವು ಸುರಕ್ಷತಾ ಕಾರಣಗಳಿಗಾಗಿ ಸ್ಥಗಿತಗೊಂಡಿತ್ತು ಎಂದು ಈ ಮುನ್ನ ಅಧಿಕಾರಿಗಳು ಹೇಳಿದ್ದರು.

ಘಟನೆಯಲ್ಲಿ ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ತುರ್ತು ಸೇವಾ ಅಧಿಕಾರಿಗಳು ಹೇಳಿರುವುದಾಗಿ ಸರ್ಕಾರಿ ಸ್ವಾಮ್ಯದ ತಾಸ್ ಮತ್ತು ರಿಯಾ-ನೋವೋಸ್ತಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಇಂಟರ್‍ಫ್ಯಾಕ್ಸ್ ಸುದ್ದಿ ಸಂಸ್ಥೆ ಕೂಡ ಘಟನೆಯಲ್ಲಿ 52 ಜನರು ಮೃತಪಟ್ಟಿದ್ದಾರೆಂದು ಪ್ರಾದೇಶಿಕ ಆಡಳಿತದ ಪ್ರತಿನಿಯೊಬ್ಬರು ಹೇಳಿರುವುದಾಗಿ ಉದಾಹರಿಸಿದೆ.

ನೈಋತ್ಯ ಸೈಬೀರಿಯಾದ ಕೆಮೆದೋವೋ ಪ್ರದೇಶದ ಲಿಸ್ತ್‍ವಿಯಾನ್ಜಾನ್ಯಾ ಕಲ್ಲಿದ್ದಲು ಗಣಿಯಲ್ಲಿ ಬೆಂಕಿ ಹೊತ್ತಿಕೊಂಡು ಶೀಘ್ರವೇ ವಾತಾಯನ ವ್ಯವಸ್ಥೆಯ ಮೂಲಕ ಗಣಿಯಲ್ಲಿ ಹೊಗೆ ತುಂಬಿಕೊಂಡಿತು. ಘಟನೆ ಜರುಗಿದಾಗ ಗಣಿಯಲ್ಲಿ ಒಟ್ಟು 285 ಜನರಿದ್ದರು. ಈ ಮುನ್ನ ರಕ್ಷಣಾ ಕಾರ್ಯಕರ್ತರು 239 ಗಣಿ ಕಾರ್ಮಿಕರನ್ನು ಹೊರಗೆ ಕರೆತಂದಿದ್ದರು. ಅವರಲ್ಲಿ 49 ಮಂದಿ ಗಾಯಾಳುಗಳಿದ್ದರು.

ಬೆಂಕಿ ಕಿಡಿಯೊಂದರಿಂದ ಉಂಟಾದ ಮೀಥೇನ್ ಸೋಟದಿಂದ ಅಗ್ನಿ ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ ಎಂದು ರಷ್ಯಾದ ಡೆಪ್ಯುಟಿ ಪ್ರಾಸಿಕ್ಯೂಟರ್ ಜನರಲ್ ಡಿಮಿಟ್ರಿ ಡೆಮೆಶಿನ್ ಅವರು ಸುದ್ದಿಗಾರರಿಗೆ ಹೇಳಿದ್ದಾರೆ.

Facebook Comments