ಕಾಲವನ್ನೂ ಮೀರಿ ನಿಂತವರು ಗಾಂಧೀಜಿ : ಆರ್.ವಿ.ದೇಶಪಾಂಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.2- ಸತ್ಯ, ಅಹಿಂಸೆಯ ಮೂಲಕ ಜಗತ್ತಿನಲ್ಲಿ ಹೊಸ ಮನ್ವಂತರವನ್ನು ಸ್ಥಾಪಿಸಿದ ಮಹಾನುಭಾವರು ಹಾಗೂ ತಮ್ಮ ಆಚಾರ-ವಿಚಾರಗಳ ಮೂಲಕ ದೇಶ ಮತ್ತು ಕಾಲವನ್ನು ಮೀರಿ ನಿಂತವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.

ಮಹಾತ್ಮ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾದಾಗ ಮಾತ್ರ ದೇಶವು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಈ ಕಾರ್ಯ ಸ್ವಯಂ ಪ್ರೇರಿತವಾಗಬೇಕು ಆಗ ಮಾತ್ರ ಗಾಂಧಿ ಕಂಡ ಕನಸು ನನಸು ಮಾಡಲು ಸಾಧ್ಯ ಎಂದು ತಿಳಿಸಿದ್ದಾರೆ. ಗಾಂಧೀಜಿ ಕಂಡ ಕನಸುಗಳ ಪೈಕಿ ಹಲವಾರು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ನಾವು ಏನು ವಿಚಾರ ಮಾಡುತ್ತೇವೆ, ಏನು ನುಡಿಯುತ್ತೇವೆ ಅದರಂತೆ ನಡೆದಾಗ ಮಾತ್ರ ಮಹಾತ್ಮರ ರಾಮರಾಜ್ಯದ ಕಲ್ಪನೆ ನನಸಾಗುತ್ತದೆ.

ಈಗಲಾದರೂ ಅವರ ವೈಚಾರಿಕತೆಯನ್ನು ಅರ್ಥ ಮಾಡಿಕೊಂಡು ಮುಂದುವರಿಯಬೇಕು ಎಂದು ಹೇಳಿದ್ದಾರೆ. ಗಾಂಧೀಜಿ ಅನುಸರಿಸಿದ ಮಾರ್ಗಗಳೇ ನಮಗೆ ದಾರಿದೀಪವಾಗಬೇಕು ಆಗ ಮಾತ್ರ ನಾವು ನಿಜವಾಗಿಯೂ ಬಾಪುವಿಗೆ ನಮನ ಸಲ್ಲಿಸಿದಂತಾಗುತ್ತದೆ ಎಂದು ದೇಶಪಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments