ರಕ್ಷಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಪಂಕಜ್ ನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ. 23- ಚೈತ್ರದ ಚಂದ್ರಮ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ನಟ, ನಿರ್ದೇಶಕ ಕಲಾಸಾಮ್ರಾಟ್ ಎಸ್.ನಾರಾಯಣ್‍ರ ಪುತ್ರ ಪಂಕಜ್ ನಾರಾಯಣ್ ಸಪ್ತಪದಿ ತುಳಿಯುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ. ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಂಕಜ್ , ರಕ್ಷಿತಾರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಮದುವೆ ಸಮಾರಂಭದಲ್ಲಿ ಚಿತ್ರರಂಗದ ಕೆಲ ಆಪ್ತರು, ಸ್ನೇಹಿತರು ಹಾಗೂ ಬಂಧುಗಳು ಮಾತ್ರ ಪಾಲ್ಗೊಂಡಿದ್ದರು.ವಧು ರಕ್ಷಿತಾ ಬಿಳಿ ಮತ್ತು ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರೆ, ಪಂಕಜ್ ಪಂಚೆ ಹಾಗೂ ಶಲ್ಯ ತೊಟ್ಟು ಮಧುಮಗನಾಗಿ ಮಿಂಚುತ್ತಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್, ಸೃಜನ್‍ಲೋಕೇಶ್, ಚಿಕ್ಕಣ್ಣ, ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ನಟಿಯರಾದ ಭಾರತಿ ವಿಷ್ಣುವರ್ಧನ್, ಶೃತಿ, ಸುಧಾರಾಣಿ, ಗಿರಿಜಾ ಲೋಕೇಶ್, ಶ್ವೇತಾ ಚೆಂಗಪ್ಪ, ನಿರ್ದೇಶಕ ಯೋಗರಾಜಭಟ್ ಮುಂತಾದವರು ಆಗಮಿಸಿ ನೂತನ ವಧು-ವರರಿಗೆ ಶುಭ ಹಾರೈಸಿದರು.

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಪಂಕಜ್ ನಾರಾಯಣ್ ಗಂಡುಗಲಿ, ವಿಶಾಲಾಕ್ಷ್ಮಮ್ಮನಗಂಡ, ಬಾನಲ್ಲೂ ನೀನೆ ಭುವಿಯಲ್ಲೂ ನೀನೆ, ಜಮೀನ್ದಾರ್ರು, ವೀರು ಮುಂತಾದ ಚಿತ್ರಗಳಲ್ಲಿ ನಟಿಸಿ ನಂತರ ಚೈತ್ರದ ಚಂದ್ರಮ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಚೆಲುವಿನ ಚಿಲಿಪಿಲಿ ಚಿತ್ರಗಳಲ್ಲಿ ನಟಿಸಿದ್ದರು. ದಕ್ಷ, ರಾಣ, ದುಷ್ಟ, ಒಡೆಯ ಮುಂತಾದ ಚಿತ್ರಗಳಲ್ಲಿ ಪೆÇೀಷಕ ಪಾತ್ರಗಳಲ್ಲಿ ನಟಿಸಿರುವುದಲ್ಲದೆ ಪಕ್ಕಾ ಚುಕ್ಕಾ ಎಂಬ ಚಿತ್ರವನ್ನು ನಿರ್ಮಿಸಿದ್ದರು.

ಅಪ್ಪನಂತೆ ನಿರ್ದೇಶಕನಾಗಬೇಕೆಂಬ ಕನಸು ಹೊತ್ತಿರುವ ಪಂಕಜ್ ನಾರಾಯಣ್ ಮುಂದೆ ನಟನಾಗಿ ಮುಂದುವರೆಯುತ್ತಾರೋ ಅಥವಾ ನಿರ್ದೇಶಕನ ಕ್ಯಾಪ್ ಧರಿಸುತ್ತಾರೋ ಎಂಬುದು ಸದ್ಯದಲ್ಲೇ ತಿಳಿಯಲಿದೆ.

Facebook Comments