ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸುವಂತೆ ಸಿಎಂಗೆ ಎಸ್.ನಾರಾಯಣ್ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.28-ಪಾವನವಾದ ಈ ಮಾನವ ಜನ್ಮ ಸಾರ್ಥಕತೆಗೆ ಭಗವದ್ಗೀತೆಯ ನೆರವು ಅನಿವಾರ್ಯವಾಗಿದೆ. ಪಠ್ಯ ಪುಸ್ತಕದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಅಗತ್ಯವಿದೆ ಎಂದು ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಮುಖೇನ ಮನವಿ ಮಾಡಿರುವ ಅವರು, ಭವಿಷ್ಯದ ಪೀಳಿಗೆಯೂ ಸುಂದರಗೊಳ್ಳಬೇಕಾದರೆ ಮಲೀನಗೊಳ್ಳದ ಮನಸ್ಸಿಗೆ ಭಗವದ್ಗೀತೆಯ ಸಾರಾಂಶಗಳ ಸಿಂಚನವಾಗಬೇಕು. ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆ ತರುವುದು ಭಗವದ್ಗೀತೆಯ 18 ಅಧ್ಯಯಗಳನ್ನು ವಿಂಗಡಿಸಿ ನಾಲ್ಕನೇ ತರಗತಿಯಿಂದ ಪಿಯುಸಿ ವರೆಗೆ ಕೊಂಡೊಯ್ಯಬೇಕೆಂದು ಅವರು ತಿಳಿಸಿದ್ದಾರೆ.

ನಾಲ್ಕನೆ ತರಗತಿಗೆ ಒಂದನೇ ಅಧ್ಯಾಯ, ಐದನೇ ತರಗತಿಗೆ ಎರಡನೇ ಅಧ್ಯಾಯ, ಆರನೇ ತರಗತಿಗೆ ಮೂರನೇ ಅಧ್ಯಾಯ, 7ನೇ ತರಗತಿಗೆ ನಾಲ್ಕು ಮತ್ತು 5ನೇ ಅಧ್ಯಾಯ, 8ನೇ ತರಗತಿಗೆ 6 ಮತ್ತು 7ಅಧ್ಯಾಯ, 9ನೇ ತರಗತಿಗೆ 8 ಮತ್ತು 9ನೇ ಅಧ್ಯಾಯ, 10ನೇ ತರಗತಿಗೆ 10, 11 ಮತ್ತು 12ನೇ ಅಧ್ಯಾಯ, ಪ್ರಥಮ ಪಿಯುಸಿಗೆ 13,14,15ನೇ ಅಧ್ಯಾಯ, ದ್ವಿತೀಯ ಪಿಯುಸಿಗೆ 16,17,18ನೇ ಅಧ್ಯಾಯ. ಈ ರೀತಿ 18 ಅಧ್ಯಯಗಳನ್ನು ವಿಂಗಡಿಸಿ ಪಠ್ಯದಲ್ಲಿ ಅಳವಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಮನುಷ್ಯನಿಗೆ ವಿದ್ಯೆಯೊಂದೇ ಮುಖ್ಯವಲ್ಲ. ವಿವೇಕ, ವಿನಯ ಬಲು ಮುಖ್ಯ. ಭಗವದ್ಗೀತೆಯ ಸಾರಾಂಶದಿಂದ ಇದು ಸಾಧ್ಯ. ಈ ಜ್ಞಾನದ ಸೌಂದರ್ಯ ಅನಂತವಾದದ್ದು, ಈ ದೇಹ ಭಗವಂತನ ಕೊಡುಗೆ ದೇಹದ ಪ್ರತಿಯೊಂದು ಕೋಶವೂ ಅವನಿಂದಲೇ ಸೃಷ್ಟಿಯಾದದ್ದು, ಇಂತಹ ಪವಿತ್ರವಾದ ದೇಹದ ತುಂಬಾ ಗೀತ ಸಾರದ ಸಂಚಲನವಾದರೆ ಸಜ್ಜನರಾಗಿ ಬದುಕಲು ಸಾಧ್ಯವಾಗುತ್ತದೆ.

ಕುಟುಂಬ ಸಜ್ಜನಿಕೆಯನ್ನು ಪಾಲಿಸುತ್ತದೆ. ಸುಂದರ ಸಮಾಜ ನಿರ್ಮಾಣವಾಗುತ್ತದೆ. ಭಗವದ್ಗೀತೆಯು ಧರ್ಮಾತೀತವಾದದ್ದು ಹಾಗಾಗಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ, ಎಲ್ಲಾ ಭಾಷೆಗಳಲ್ಲಿಯೂ ಪಠ್ಯ ಪುಸ್ತಕಗಳಲ್ಲಿ ತರುವ ಮೂಲಕ ಮನುಕುಲವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕು. ಈ ಕಾರ್ಯವನ್ನು ಅನುಷ್ಠಾನಕ್ಕೆ ತಂದಿದ್ದೇ ಆದರೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದಂತಾಗುತ್ತದೆ.

ಬೇರೆ ರಾಜ್ಯಗಳಲ್ಲೂ ಕಣ್ಣು ತೆರೆಸಿದಂತಾಗುತ್ತದೆ. ಕನ್ನಡ ನಾಡಿನ ಜನಮಾನಸದಲ್ಲಿ ತಮ್ಮ ಹೆಸರು ಅಚ್ಚಳಿಯದೇ ಉಳಿಯುವುದರಲ್ಲಿ ಸಂಶಯವೇ ಇಲ್ಲ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಂದು ನಾಡಿನಲ್ಲಿ ಮನುಷ್ಯ ಮನಬಂದತೆ ವರ್ತಿಸುತ್ತಿದ್ದಾನೆ. ಸರಿ, ತಪ್ಪುಗಳ ಪರಿವೇ ಇಲ್ಲದೆ ಮುಂದಾಗಬಹುದಾದ ಪರಿಣಾಮಗಳ ಅರಿವಿಲ್ಲದೆ ಹಗಲು-ಇರುಳುಗಳ ವ್ಯತ್ಯಾಸವಿಲ್ಲದೆ ಕಾನೂನನ್ನು ಗೌರವಿಸದೆ, ನಿಯಮಗಳನ್ನು ಪಾಲಿಸದೆ, ಶಿಕ್ಷೆಗಳ ಪ್ರಮಾಣದ ಭಯವಿಲ್ಲದೆ ಬದುಕಿನ ಶೈಲಿ ನಿಜಕ್ಕೂ ಭಯಾನಕವಾಗಿದೆ.

ಇದು ಹೀಗೆ ಮುಂದುವರೆದರೆ ಮುಂದಿನ ಪೀಳಿಗೆ ಅಪಾಯದಲ್ಲಿ ಸಿಲುಕುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ ಮನಸ್ಸುಗಳು ಮಲೀನಗೊಂಡಿರುವುದು. ಮನಸ್ಸುಗಳನ್ನು ಬಾಲ್ಯದಿಂದಲೇ ಹಸನು ಮಾಡಬೇಕಾಗಿದೆ. ಭಗವದ್ಗೀತೆಯ 18 ಅಧ್ಯಾಯಗಳಿಂದ ಸಾಧ್ಯವಿದೆ. ಹಾಗಾಗಿ ಪಠ್ಯಗಳಲ್ಲಿ ಇದನ್ನು ಅಳವಡಿಸುವುದು ಸೂಕ್ತವಾಗಿದೆ ಎಂದು ಎಸ್.ನಾರಾಯಣ್ ಅವರು ತಿಳಿಸಿದ್ದಾರೆ.

Facebook Comments

Sri Raghav

Admin