ಏಕವಚನದಲ್ಲಿ ಕಿತ್ತಾಡಿಕೊಂಡ ಸಚಿವರಾದ ಎಸ್.ಟಿ.ಸೋಮಶೇಖರ್- ನಾರಾಯಣಗೌಡ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ತಮ್ಮ – ತಮ ಇಲಾಖೆಗಳಲ್ಲಿ ಹಸ್ತಕ್ಷೇಪ ನಡೆಸಲಾಗುತ್ತದೆ ಎಂಬ ಕಾರಣಕ್ಕಾಗಿ ಸಚಿವರಿಬ್ಬರು, ಕಿತ್ತಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ತೋಟಗಾರಿಕೆ ಸಚಿವ ಕೆ.ನಾರಾಯಣಗೌಡ ಪರಸ್ಪರ ಏಕವಚನದಲ್ಲಿ ಕಿತ್ತಾಡಿಕೊಂಡಿದ್ದಾರೆ.

ಕೊನೆಗೆ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರ ಮಧ್ಯಪ್ರವೇಶದಿಂದಾಗಿ ಇಬ್ಬರ ಜಗಳ ಕೊನೆಗೊಂಡಿದೆ.
ಗುರುವಾರ ವಿಧಾನಸೌಧದಲ್ಲಿ ಕೆಲವು ಇಲಾಖೆಗಳ ಸಚಿವರ ಸಭೆ ಕರೆಯಲಾಗಿತ್ತು.

ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೋಮಶೇಖರ್ ಹಾಗೂ ನಾರಾಯಣಗೌಡ ಒಬ್ಬರ ಮೇಲೊಬ್ಬರು ವಾಗ್ದಾಳಿ ನಡೆಸಿದ್ದಾರೆ. ಲಾಕ್‍ಡೌನ್ ವಿಚಾರದಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳ ಸುಗಮ ಸಾಗಾಟ ಸಂಬಂಧ ನಡೆಯುತ್ತಿರುವ ಸಭೆಯಲ್ಲಿ ಹೋಗೋ, ಬಾರೋ ಎಂದು ಏಕವಚದಲ್ಲಿ ಸಚಿವರು ಜಗಳವಾಡಿದ್ದಾರೆ.

ಇತ್ತ ನನ್ನ ಇಲಾಖೆಯಲ್ಲಿ ನೀನು ಹಸ್ತಕ್ಷೇಪ ಮಾಡಬೇಡವೆಂದು ನಾರಾಯಣಗೌಡ ಎಚ್ಚರಿಕೆ ಕೊಟ್ಟರೆ, ಅತ್ತ ನಾನು ಸಹಕಾರ ಸಚಿವ. ನನಗೆ ಕೃಷಿ ಉತ್ಪನ್ನಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಈ ವೇಳೆ ಇಬ್ಬರು ಸಚಿವರ ನಡುವಿನ ಕಿತ್ತಾಟವನ್ನು ಇತರೆ ಸಚಿವರು ಮೌನ ಪ್ರೇಕ್ಷಕರಾಗಿ ನೋಡುತ್ತಿದ್ದರು.

ಆ ಬಳಿಕ ಇಬ್ಬರನ್ನು ಸಮಾಧಾನಪಡಿಸುವಲ್ಲಿ ಡಿಸಿಎಂ ಅಶ್ವತ್ಥ್‌ನಾರಾಯಣ್ ಹೈರಾಣರಾಗಿದ್ದು, ಸಚಿವರ ನಡುವೆ ಕಿತ್ತಾಟ ಜೋರಾಗುತ್ತಿದ್ದಂತೆ ಸಭಾಂಗಣದ ಬಾಗಿಲನ್ನು ಸಿಬ್ಬಂದಿ ಮುಚ್ಚಿದರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಅಶ್ವತ್ಥ್‌ನಾರಾಯಣ್, ಇಂದಿನ ಸಭೆಯಲ್ಲಿ ಅಂತದ್ದು ಏನು ಆಗಿಲ್ಲ.

ಸಣ್ಣ ಪುಟ್ಟ ಸಮಸ್ಯೆಗಳು ಎಲ್ಲದರಲ್ಲೂ ಇರತ್ತೆ ಬಿಡಿ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸೋಮಶೇಖರ್ ಅವರು, ಇದೆಲ್ಲಾ ಸಣ್ಣ ಪುಟ್ಟ ಆಂತರಿಕ ವಿಚಾರವಷ್ಟೇ. ಇಲಾಖೆಯಲ್ಲಿ ಆಂತರಿಕ ವಿಷಯಗಳಲ್ಲಿ ಅಸಮಾಧಾನ ಇದೆ. ಹೀಗಾಗಿ ಸಭೆಯಲ್ಲಿ ಇಬ್ಬರ ನಡುವಿನ ಮಾತಿನ ವಾಗ್ವಾದ ಜೋರಾಯ್ತು ಎಂದು ಕೊನೆಗೂ ಇಬ್ಬರು ಸಚಿವರ ನಡುವಿನ ಅಸಮಾಧಾನವನ್ನ ಸೋಮಶೇಖರ್ ಒಪ್ಪಿಕೊಂಡರು.

Facebook Comments

Sri Raghav

Admin