ಉಸ್ತುವಾರಿ ಸಚಿವರ ಗಮನಕ್ಕೆ ಬಾರದೆ ವರ್ಗಾವಣೆ ದಂಧೆ : ಸಾ.ರಾ.ಮಹೇಶ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.5- ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಾರದೆ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ.

ಒಬ್ಬರು ಅಧಿಕೃತ ಮತ್ತೊಬ್ಬರು ಆ್ಯಕ್ಟಿಂಗ್(ನಟನೆ) ಎಂದು ವ್ಯಂಗ್ಯವಾಡಿದರು. ಅಬಕಾರಿ ಡಿಸಿ ಮೈಸೂರಿಗೆ ಬಂದು 9 ತಿಂಗಳು ಆಗಿಲ್ಲ. ಏಕಾಏಕಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಯಾಕೆ ವರ್ಗಾವಣೆ ಮಾಡಿದರು, ಯಾರು ಪತ್ರವ್ಯವಹಾರ ಮಾಡಿದರು ಎಂದು ಪ್ರಶ್ನಿಸಿದ ಅವರು, ಈ ಪ್ರಕರಣದಲ್ಲಿ ಎರಡು ಕೋಟಿ ರೂ.ಗಳ ವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.

ಹುಣಸೂರಿನಿಂದ ಲಾರಿಗಟ್ಟಲೇ ಅಕ್ಕಿಯನ್ನು ಸಂಗ್ರಹಿಸಲಾಗಿದೆ. ಆದರೆ ಇದು ಎಲ್ಲಿಗೆ ಹೋಯಿತು ಎಂಬುದು ಬಹಿರಂಗವಾಗಿಲ್ಲ. ಅದನ್ನು ಬಹಿರಂಗಪಡಿಸಲಿ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದ್ದೇನೆ. ಒಂದು ವೇಳೆ ಜಿಲ್ಲಾಧಿಕಾರಿ ಮಾಹಿತಿ ನೀಡದಿದ್ದರೆ ತಮ್ಮ ಬಳಿ ಇರುವ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದರು.

ಮಾಜಿ ಸಚಿವ ವಿಶ್ವನಾಥ್ ಅವರು ಕೊರೊನಾ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರ ಇದ್ದಿದ್ದರೆ 50 ಸಾವಿರ ಮಂದಿ ಸಾಯುತ್ತಿದ್ದರು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಚಿವರು ಮಾತನಾಡುವಾಗ ಪದ ಬಳಕೆ ಸರಿಯಾಗಿರಬೇಕು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಹೇಳಿದರು.

ಕೊಡಗಿನಲ್ಲಿ ಫಲಾನುಭವಿಗಳಿಗೆ ಕೊಟ್ಟ ಮನೆಗಳ ಹಿಂದೆ ಯಾರ ಶ್ರಮ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಮನೆ ಕೊಡುವಾಗ ಒಂದು ಮಾತೂ ಸಹ ಆಡಿಲ್ಲ ಎಂದು ಟೀಕಿಸಿದರು. ನೀವು ಮಾತನಾಡುವಾಗ ಎಚ್ಚರದಿಂದ ಮಾತನಾಡಿ ಎಂದು ಹೇಳಿದರು.

Facebook Comments