ಕರ್ನಾಟಕ ಬಂದ್‍ಗೆ ಬೆಂಬಲ ನೀಡಿ: ಸಾ.ರಾ.ಗೋವಿಂದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.23- ಕನ್ನಡಿಗರ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಇಂದು ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ನಮ್ಮವರಿಂದಲೇ ನಮಗೆ ನಿರಂತರ ಅನ್ಯಾಯವಾಗುತ್ತಿದೆ. ಹಾಗಾಗಿ ನಾವೆಲ್ಲ ಒಟ್ಟಾಗಿ ಹೋರಾಟ ಮಾಡಿ ಕನ್ನಡವನ್ನು, ಕನ್ನಡಿಗರನ್ನು ಕಾಪಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕಾಗಿ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದೇವೆ.

ಎಲ್ಲರೂ ಬೆಂಬಲ ನೀಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಅಖಿಲ ಕರ್ನಾಟಕ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮನವಿ ಮಾಡಿದರು. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಸಿ ಬಳ್ಳಾರಿಯ ಜಿಲ್ಲಾಕಾರಿ ಕಚೇರಿ ಎದುರು ಕನ್ನಡ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ಅವರು ಕನ್ನಡ ನಾಡು-ನುಡಿ-ಸಂಸ್ಕøತಿ ಮೇಲೆ ನಿರಂತರ ಅನ್ಯಾಯವಾಗುತ್ತಿದೆ.

ಇದಕ್ಕಾಗಿ ಹೋರಾಟ ಮಾಡುತ್ತಿರುವ ಕನ್ನಡಪರ ಹೋರಾಟಗಾರರನ್ನು ಅಪಹಾಸ್ಯ ಮಾಡುವ, ನಿಂದನೆ ಮಾಡುವ ಕೆಲಸಗಳು ನಡೆಯುತ್ತಿವೆ. ಬಂದ್ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ಇದಾವುದಕ್ಕೂ ಕಿವಿಗೊಡಬೇಡಿ ಎಂದರು. ರಾಜ್ಯ ಸರ್ಕಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಡಲು ಮುಂದಾಗಿದೆ. ಇದಕ್ಕಾಗಿ ರಾಜ್ಯಾದ್ಯಂತ ಹೋರಾಟ ರೂಪಿಸಿದ್ದೇವೆ. ಎಲ್ಲರ ಬೆಂಬಲ ಅಗತ್ಯ ಎಂದು ಹೇಳಿದರು.

ಐತಿಹಾಸಿಕ ಪರಂಪರೆ, ಏಕೀಕರಣಕ್ಕೆ ವೇದಿಕೆಯಾಗಿದ್ದ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಲಾಗಿದೆ. ಇದು ಕೂಡ ಖಂಡನೀಯ ಎಂದು ಹೇಳಿದರು. ಸಾ.ರಾ.ಗೋವಿಂದು ಮಾತನಾಡಿ, ರಾಜ್ಯದಲ್ಲಿ ಮರಾಠಿಗರು, ಕನ್ನಡಿಗರು ಸಹೋದರರಂತೆ ಇದ್ದರು. ಮರಾಠ ಅಭಿವೃದ್ಧಿ ನಿಗಮ ಮಾಡುವ ಮೂಲಕ ಸರ್ಕಾರ ಪ್ರತ್ಯೇಕಗೊಳಿಸಿ ನಮ್ಮ ನಡುವೆ ಹುಳಿ ಹಿಂಡುವ ಕೆಲಸ ಮಾಡಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಮರಾಠ, ತಮಿಳು, ಗುಜರಾತಿ, ಮಾರ್ವಾಡಿ ಹೀಗೆ ಎಲ್ಲ ಅಭಿವೃದ್ಧಿ ಪ್ರಾಕಾರಗಳನ್ನು ಮಾಡಿ ಕನ್ನಡಿಗರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವ ಹುನ್ನಾರವಿದೆ ಎಂದು ಗಂಭೀರ ಆರೋಪ ಮಾಡಿದರು.

ರಾಜ್ಯದಲ್ಲೇನಾದರೂ ಕನ್ನಡ ಉಳಿದಿದೆ ಎಂದರೆ ಅದು ನಮ್ಮಂತಹ ಹೋರಾಟಗಾರರಿಂದ, ರಾಜಕಾರಣಿಗಳಿಂದ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾ.ರಾ.ಗೋವಿಂದು ಅವರು ಹೋರಾಟಗಾರರನ್ನು ಅವಮಾನ ಮಾಡುವಂತಹ ಕ್ಷುಲ್ಲಕ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳಿಗೆ ಹೋರಾಟದ ಮೂಲಕ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ರಾಜ್ಯ ಸರ್ಕಾರ ಕೂಡಲೇ ನಿಗಮವನ್ನು ಹಿಂಪಡೆಯಬೇಕು. ಡಿ.5ರಂದು ಬಂದ್ ಮಾಡುವ ಮೂಲಕ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡುತ್ತೇವೆ. ಬಂದ್ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Facebook Comments