ಅಣ್ಣಾಮಲೈ ವಿರುದ್ಧ ಗುಡುಗಿದ ಸಾ.ರಾ.ಗೋವಿಂದ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.31- ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಎರಡೂ ರಾಜ್ಯಗಳ ನಡುವಿನ ಸೌಹಾರ್ದಯುತ ಪರಿಸ್ಥಿತಿಯನ್ನು ಕದಡುವ ಕೆಲಸ ಮಾಡಬೇಡಿ ಎಂದು ಗುಡುಗಿದ್ದಾರೆ.

ಮೇಕೆದಾಟು ಯೋಜನೆ, ಕುಡಿಯುವ ನೀರಿನ ಯೋಜನೆಯಾಗಿದೆ. ಎರಡೂ ರಾಜ್ಯಗಳು ಪರಸ್ಪರ ಸಹಕಾರ ನೀಡಿ ಈ ಯೋಜನೆಗೆ ಅವಕಾಶ ನೀಡಬೇಕು. ಇಂತಹ ಸಂದರ್ಭದಲ್ಲಿ ತಮ್ಮ ರಾಜಕೀಯ ಅಸ್ತಿತ್ವಕ್ಕೆ ತಾವು ಇಂತಹ ಹೇಳಿಕೆ ನೀಡಿ ಕನ್ನಡಿಗರ ಭಾವನೆ ಕೆರಳಿಸಿದ್ದೀರಿ. ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಣ್ಣಾಮಲೈ ವಿರುದ್ಧ ಆಗಸ್ಟ್ 5ರಂದು ಫ್ರೀಡಂಪಾರ್ಕ್‍ನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ನಾಡಿನ ಎಲ್ಲ ಕನ್ನಡಪರ ಹೋರಾಟಗಾರರು, ಪ್ರಗತಿಪರರು, ರೈತಪರ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸಿಂಗಂ ಕೀರ್ತಿ ಕೊಟ್ಟಿದ್ದು ಕರ್ನಾಟಕ. ರಾಜ್ಯದಲ್ಲಿ ಸೇವೆ ಸಲ್ಲಿಸಿದ ತಾವು ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ರಾಜಕೀಯ ಕಾರಣಕ್ಕಾಗಿ ಇಂತಹ ಹೇಳಿಕೆ ನೀಡಬಾರದಿತ್ತು ಎಂದು ಅವರು ಹೇಳಿದರು. ತಾವು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನಾವು ಯಾರೂ ಅನ್ಯರಾಜ್ಯದವರೆಂದು ಪರಿಗಣಿಸಲಿಲ್ಲ. ತಮಗೆ ಎಲ್ಲ ರೀತಿಯ ಸಹಕಾರ, ಬೆಂಬಲ ನೀಡಿ ತಮ್ಮ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿದ್ದೆವು. ರಾಜಕೀಯ ಅಧಿಕಾರಕ್ಕಾಗಿ ಐಪಿಎಸ್ ಹುದ್ದೆ ತೊರೆದು ತಮಿಳುನಾಡಿಗೆ ತೆರಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ತಾವು ಮುಂದಿನ ರಾಜಕೀಯ ಅಸ್ತಿತ್ವಕ್ಕಾಗಿ ಎರಡೂ ರಾಜ್ಯಗಳ ನಡುವೆ ರಾಜಕೀಯ ಸಂಘರ್ಷ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ಎಷ್ಟು ಸಮಂಜಸ ಎಂದು ಕಿಡಿಕಾರಿದ್ದಾರೆ.

ಕನ್ನಡಿಗರ ಸಹಿಷ್ಣುತೆ ದೌರ್ಬಲ್ಯವಲ್ಲ. ನಾವು ದಬ್ಬಾಳಿಕೆಯನ್ನು ಸಹಿಸುವುದಿಲ್ಲ. ನೆಲ-ಜಲ-ನಾಡಿನ ಸಂಸ್ಕøತಿಯಲ್ಲಿ ಯಾವುದೇ ರಾಜಿ ಇಲ್ಲ. ಮೊದಲಿನಿಂದಲೂ ನಾವು ಈ ವಿಷಯದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತ ಬಂದಿದ್ದೇವೆ. ಈ ಯೋಜನೆಗಾಗಿ ಈಗಲೂ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದೇವೆ ಎಂದು ಅವರು ಹೇಳಿದರು.

ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆಯನ್ನು ಬಿಜೆಪಿ ಸರ್ಕಾರ ಕೂಡಲೇ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅನಗತ್ಯ ವಿಳಂಬ ಮಾಡಬಾರದು. ಮೇಕೆದಾಟು ಯೋಜನೆ ಕೈಗೊಳ್ಳಬಾರದೆಂದು ತಮಿಳುನಾಡು ಸರ್ಕಾರ ಕೈಗೊಂಡಿರುವ ನಿರ್ಣಯವು ಕೂಡ ಜನವಿರೋಧಿಯಾಗಿದೆ. ನಮ್ಮ ಭಾಗದ ಜಲವನ್ನು ನಾವು ಬಳಸಿಕೊಳ್ಳುವುದಕ್ಕೆ ಇವರ ತಕರಾರು ಏನೆಂಬುದು ನಮ್ಮ ಪ್ರಶ್ನೆಯಾಗಿದೆ.

ರಾಜಕೀಯಕ್ಕಾಗಿ ಕಾವೇರಿ ನದಿ ನೀರಿನ ವಿವಾದವನ್ನು ನಿರಂತರವಾಗಿ ತಮಿಳುನಾಡು ಸರ್ಕಾರ ಬಳಸಿಕೊಳ್ಳುತ್ತಲೇ ಬಂದಿದೆ. ಇದು ಅದರ ಮುಂದುವರಿದ ಭಾಗವಾಗಿದೆ. ಬೀದಿಗಿಳಿದು ಹೋರಾಟ ಮಾಡುವುದರ ಜತೆಗೆ ಕಾನೂನಾತ್ಮಕವಾಗಿಯೂ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು. ಆಗಸ್ಟ್ 5ರಂದು ನಡೆಯುವ ಪ್ರತಿಭಟನೆಯಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ, ಕನ್ನಡ ಸೇನೆ ಕೆ.ಆರ್.ಕುಮಾರ್, ಕರವೇ ಪ್ರವೀಣ್‍ಕುಮಾರ್ ಶೆಟ್ಟಿ, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಚಿತ್ರನಟ ಮತ್ತು ಪ್ರಗತಿಪರ ಚಿಂತಕ ಮುಖ್ಯಮಂತ್ರಿಚಂದ್ರು ಸೇರಿದಂತೆ ಹಲವು ಗಣ್ಯರು ಪಕ್ಷಾತೀತವಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

Facebook Comments