ಶಾಸಕ ಯತ್ನಾಳ್‌ರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ : ಸಾ.ರಾ.ಗೋವಿಂದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.21- ಕನ್ನಡ ಹೋರಾಟಗಾರರು ರೋಲ್‍ಕಾಲ್ ಹೋರಾಟಗಾರರು, ನಕಲಿ ಹೋರಾಟಗಾರರು. ಅವರ ಹೋರಾಟಕ್ಕೆ ಅಂಜುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕನ್ನಡಪರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರು, ಯತ್ನಾಳ್ ವಿರುದ್ಧ ಹರಿಹಾಯ್ದಿದ್ದು, ನಾಲಿಗೆ ಮೇಲೆ ಹಿಡಿತವಿಲ್ಲದ, ಮತಿಯನ್ನು ಕಳೆದುಕೊಂಡಿರುವ ಯತ್ನಾಳ್ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕಿದೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.

ಅಧಿಕಾರದ ಆಸೆಗೆ ಪದೇ ಪದೇ ಪಕ್ಷಾಂತರ ಮಾಡುವ ಯತ್ನಾಳ್, ಜೀವಮಾನವಿಡೀ ಕನ್ನಡಕ್ಕಾಗಿ ಹೋರಾಟ ಮಾಡಿಕೊಂಡು ಬಂದಿರುವ ನಮ್ಮಂತಹವರ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಹೊಂದಿಲ್ಲ. ಬಹಿರಂಗ ವೇದಿಕೆ ಸಿದ್ಧಪಡಿಸುತ್ತೇವೆ. ಯಾರ್ಯಾರ ಸಂಪಾದನೆ ಎಷ್ಟಿದೆ ಎಂಬುದು ಚರ್ಚೆಯಾಗಲಿ ಎಂದು ಹೇಳಿದರು.

ಅಧಿಕಾರಕ್ಕಾಗಿ ಪಕ್ಷ ಬದಲಾಯಿಸುವ, ಜಾತ್ಯತೀತವಾದಿ ಎಂದು ಒಂದು ಪಕ್ಷ ಸೇರುವ, ಕೋಮುವಾದಿ ಎಂದು ಮತ್ತೊಂದು ಪಕ್ಷದಲ್ಲಿ ಹೇಳಿಕೊಳ್ಳುವ ಇವರಿಂದ ನಾವು ಪಾಠ ಕಲಿಯಬೇಕೇ ಎಂದು ಪ್ರಶ್ನಿಸಿದ್ದಾರೆ. ನಾಲಿಗೆ ಮೇಲೆ ನಿಯಂತ್ರಣವಿಲ್ಲದೆ ಮುಖ್ಯಮಂತ್ರಿ ವಿರುದ್ಧವೂ ಮಾತನಾಡುವ ಇವರನ್ನು ಹುಚ್ಚಾ ಸ್ಪತ್ರೆಗೆ ಸೇರಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಇಂದು ಏನಾದರೂ ರಾಜ್ಯದಲ್ಲಿ ಕನ್ನಡ ಉಳಿದಿದೆ ಎಂದರೆ ಅದು ಹೋರಾಟಗಾರರಿಂದ ಮಾತ್ರ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಕನ್ನಡ ಹಿತಾಸಕ್ತಿಯನ್ನು ಬಲಿ ಕೊಡುವ ಸಂದರ್ಭದಲ್ಲಿ ಅದರ ವಿರುದ್ಧ ದನಿ ಎತ್ತಿ ತಮ್ಮ ಕುಟುಂಬ ಸೇರಿದಂತೆ ಎಲ್ಲವನ್ನೂ ಕಡೆಗಣಿಸಿ ಬೀದಿಗಿಳಿದು ಹೋರಾಟ ಮಾಡಿ ಜೈಲು, ಬೇಲು ಎಂದು ಪರಿತಪಿಸುತ್ತಿರುವವರು ಕನ್ನಡಪರ ಹೋರಾಟಗಾರರು. ಇವರ ನೋವು ಯತ್ನಾಳ್ ಅಂತಹವರಿಗೇನು ಗೊತ್ತು? ಗೋಕಾಕ್ ಚಳವಳಿ, ಕಾವೇರಿ, ಮಹದಾಯಿ ಎಲ್ಲ ಹೋರಾಟವನ್ನೂ ಮಾಡಿಕೊಂಡು ಬಂದವರು ಕನ್ನಡಪರ ಹೋರಾಟಗಾರರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೂಟಾಟಿಕೆಯ ರಾಜಕೀಯ ಬಿಡಲಿ: ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ಯತ್ನಾಳ್ ಕುಚೇಷ್ಟೆಯ ಮಾತುಗಳನ್ನಾಡಿದ್ದಾರೆ. ಚಳವಳಿಗಾರರ ವಿರುದ್ಧ ಯಾವ ಮಾತುಗಳನ್ನಾಡಿದ್ದಾರೋ ಅವೆಲ್ಲವೂ ಅವರಿಗೇ ಅನ್ವಯಿಸುತ್ತವೆ. ಸಚಿವ ಸ್ಥಾನ ಪಡೆಯಲು ಆಗಾಗ ತಮ್ಮ ಪಕ್ಷದ ಸರ್ಕಾರವನ್ನೇ ಬ್ಲಾಕ್‍ಮೇಲ್ ಮಾಡಿಕೊಂಡು ಬಂದವರು ಅವರೇ. ಯತ್ನಾಳ್ ಶಾಸಕರಾಗಿರುವ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ನೆರೆಯಿಂದ 25 ಸಾವಿರ ಕೋಟಿಯಷ್ಟು ನಷ್ಟವಾಗಿದೆ. 10 ಸಾವಿರ ಕೋಟಿ ರೂ. ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಭೂಮಿ, ಮನೆ ಕಳೆದುಕೊಂಡ ರೈತರಿಗೆ ಪರಿಹಾರವಿಲ್ಲ. ಅಲ್ಪ ಸ್ವಲ್ಪ ಬಿಡುಗಡೆಯಾದ ಹಣ ಪುಂಡರ ಪಾಲಾಗಿದೆ. ಜನಪ್ರತಿನಿಯಾದ ಯತ್ನಾಳ್ ಅವರಿಗೆ ಜನಪರ ಕಾಳಜಿ ಇದ್ದರೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕು. ಜಿಎಸ್‍ಟಿ ವ್ಯವಸ್ಥೆ ಜಾರಿಯಾದಾಗಿನಿಂದಲೂ ಲಕ್ಷಾಂತರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಸಂಗ್ರಹಿಸಿ ಕೇಂದ್ರಕ್ಕೆ ನೀಡುತ್ತಿದೆ.

ರಾಜ್ಯಗಳಿಗೆ ನಷ್ಟವಾಗುವ ಹಣ ಕೊಡುವ ವಾಗ್ದಾನವನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ, ರಾಜ್ಯಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಹಣ ನೀಡಿಲ್ಲ. ಯತ್ನಾಳ್ ಅವರಿಗೆ ಧೈರ್ಯವಿದ್ದರೆ ಮೋದಿ ಸರ್ಕಾರವನ್ನು ಕೇಳಿ ರಾಜ್ಯಕ್ಕೆ ಅನುಕೂಲ ಮಾಡಿಕೊಡಲಿ. ಅದನ್ನು ಬಿಟ್ಟು ನಾಡಿನ ಹಿತಾಸಕ್ತಿಗಾಗಿ ಹೋರಾಟ ಮಾಡುವ ಕನ್ನಡಪರ ಹೋರಾಟಗಾರರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.

ಬ್ಲ್ಯಾಕ್‍ಮೇಲ್ ರಾಜಕಾರಣಿ: ತಮ್ಮ ಕ್ಷೇತ್ರದ ಅನುದಾನ ಬಿಡುಗಡೆಗಾಗಿ ಮುಖ್ಯಮಂತ್ರಿಯನ್ನೇ ಬ್ಲ್ಯಾಕ್‍ಮೇಲ್ ಮಾಡುವ ರಾಜಕಾರಣಿ ಬಸವನಗೌಡ ಪಾಟೀಲ್ ಯತ್ನಾಳ್ ಎಂದು ಪ್ರವೀಣ್‍ಕುಮಾರ್ ಶೆಟ್ಟಿ ಕಿಡಿಕಾರಿದ್ದಾರೆ.  ಹಿಂದೂ ಧರ್ಮ ಎಂದು ಹೇಳುವ ಯತ್ನಾಳ್ ಅವರು ಬಿಜಾಪುರದಲ್ಲಿರುವ ಮುಸ್ಲಿಮರನ್ನು ಓಡಿಸಿದ್ದಾರೆಯೇ? ಅವರಿಗೆ ಕನ್ನಡಿಗರು ಹಿಂದೂಗಳಂತೆ ಕಾಣುವುದಿಲ್ಲವೆ? ಅವರ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಬಿಜಾಪುರದಲ್ಲಿಯೇ ಹೋರಾಟ ಮಾಡುತ್ತೇವೆ. ಯಾವ ರೀತಿ ತಡೆಯುತ್ತಾರೆ ಎಂಬುದನ್ನು ನೋಡುತ್ತೇವೆ ಎಂದು ಸವಾಲು ಹಾಕಿದರು.

ಕನ್ನಡಪರ ಹೋರಾಟಗಾರ ಶಿವರಾಮೇಗೌಡ ಮಾತನಾಡಿ, ಅಕಾರಕ್ಕಾಗಿ ಪದೇ ಪದೇ ಪಕ್ಷ ಬದಲಾಯಿಸುವ ಇವರಿಂದ ಕನ್ನಡಪರ ಹೋರಾಟಗಾರರು ಪಾಠ ಕಲಿಯಬೇಕಿಲ್ಲ. ನಾಡು-ನುಡಿ-ಸಂಸ್ಕøತಿಗಾಗಿ ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ. ನಾವ್ಯಾರೂ ನಕಲಿ ಹೋರಾಟಗಾರರಲ್ಲ. ಮುಂದಿನ ದಿನಗಳಲ್ಲಿ ಇವರ ವಿರುದ್ಧವೇ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

Facebook Comments