“ವಿಶ್ವನಾಥ್ ಎಷ್ಟಕ್ಕೆ ಸೇಲಾಗಿದ್ದರೆಂದು ಸದನಕ್ಕೆ ತಿಳಿಸಲಿ, ನನ್ನ ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.19- ಜೆಡಿಎಸ್‍ನ ಶಾಸಕರೂ ಆಗಿದ್ದ ಹಾಲಿ ಶಾಸಕ ಎಚ್.ವಿಶ್ವನಾಥ್ ಎಷ್ಟು ಕೋಟಿಗೆ ಸೇಲ್ ಆಗಿದ್ದಾರೆ ಎಂದು ಈ ಸದನಕ್ಕೆ ಬಂದು ಹೇಳಬೇಕು. ಬಿಜೆಪಿ ವ್ಯವಹಾರ ಕುದುರಿಸಿದ್ದನ್ನು ಅವರು ನನ್ನ ಜೊತೆ ವೈಯಕ್ತಿಕವಾಗಿ ಹೇಳಿದ್ದರು. ಅದು ಸುಳ್ಳು ಎಂದಾದರೆ ನಾನು ರಾಜಕೀಯವಾಗಿ ನಿವೃತ್ತಿ ಹೊಂದುತ್ತೇನೆ ಎಂದು ಪ್ರವಾಸೋಧ್ಯಮ ಸಚಿವ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭೆಯ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ರಾಜ್ಯಾಧ್ಯಕ್ಷರಾಗಿದ್ದ ವಿಶ್ವನಾಥ್ ಅವರು ನಾಲ್ಕು ತಿಂಗಳ ಹಿಂದೆ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದರು. ಶಾಸಕರನ್ನು ಖರೀದಿಸುವ ಪ್ರಯತ್ನ ಒಳ್ಳೆಯದಲ್ಲ ಎಂದು ಸಲಹೆ ನೀಡಿದ್ದರು. ಪುರಸಭೆ ಚುನಾವಣೆಯಲ್ಲಿ ಅವರು ಕೇಳಿದ ಆರು ಮಂದಿಗೆ ನಾನು ಟಿಕೆಟ್ ನೀಡಿದ್ದೇನೆ. ಆದರೂ ನನ್ನ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಆಗ ನನ್ನ ತೋಟದ ಮನೆಗೆ ಕರೆಸಿಕೊಂಡು ಖಾಸಗಿಯಾಗಿ ಮಾತನಾಡಿದ್ದೆ. ನಿಮಗೆ ಸಚಿವರಾಗುವ ಆಸೆ ಇದ್ದರೆ ಹೇಳಿ ಎಂದಿದ್ದೆ. ನನಗೆ ಅಂತಹ ಆಸೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಚುನಾವಣೆಗೆ ಒಂದಷ್ಟು ಸಾಲ ಮಾಡಿಕೊಂಡಿದ್ದೇನೆ. ಅದನ್ನು ತೀರಿಸುವ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದರು.

ಬಿಜೆಪಿಯವರು ಅವರ ಬಳಿ ಬಂದು 28 ಕೋಟಿ ರೂ. ವ್ಯವಹಾರ ಕುದುರಿಸಿದ್ದಾಗಿಯೂ ವಿಶ್ವನಾಥ್ ಹೇಳಿದರು. ಆದರೆ ನಾನು ಮಾರಿಕೊಳ್ಳುವುದಿಲ್ಲ ಎಂಬುದಾಗಿಯೂ ಸ್ಪಷ್ಟನೆ ನೀಡಿದ್ದರು. ನನಗೆ ಸಚಿವನಾಗಬೇಕೆಂಬ ಆಸೆ ಇತ್ತು. ಕುಮಾರಸ್ವಾಮಿಯವರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ರೇವಣ್ಣ ಅವರು ನನಗೆ ಒಳ್ಳೆ ಖಾತೆ ಕೊಡಲು ಬಿಡಲಿಲ್ಲ. ಪ್ರವಾಸೋದ್ಯಮ ಖಾತೆ ನಿಭಾಯಿಸುತ್ತಿದ್ದೇನೆ.

ಅದು ಕೇವಲ ಗೈಡ್ ಕೆಲಸ ಮಾಡಬಹುದು. ನಾನೇ ಸಂಪಾದಿಸಿದ ಒಂದಷ್ಟು ಹಣ ಇದೆ. ನೀವು ಯಾರ ಬಳಿ ಸಾಲ ಮಾಡಿಕೊಂಡಿದ್ದೀರಾ ಎಂದು ಹೇಳಿದರೆ, ಹಂತ ಹಂತವಾಗಿ ನಾನೇ ಅವರಿಗೆ ಹಣ ತಲುಪಿಸುತ್ತೇನೆ ಎಂದು ಅವರಿಗೆ ಭರವಸೆ ನೀಡಿದ್ದೆ. ಜು.5 ರಂದು ನಾನು ಅಮೆರಿಕದಲ್ಲಿದ್ದರೂ ಅವರಿಗೆ ಕರೆ ಮಾಡಿ ಯಾರಿಗೆ ಹಣ ತಲುಪಿಸಬೇಕೆಂದು ಕೇಳಿದ್ದೆ.

ಆದರೆ ಅವರು ನಾನೇ ಬಂದು ಮಾತನಾಡುತ್ತೇನೆ ಎಂದು ಹೇಳಿದ್ದರು. ಆದರೆ ಅವರು ಇದ್ದಕ್ಕಿದ್ದಂತೆ ಮುಂಬೈಗೆ ಹೋಗಿದ್ದು, ನನ್ನ ಮೇಲಿನ ಅಸಮಾಧಾನದಿಂದಾಗಿ ಎಂದು ಹೇಳಿಕೊಂಡಿದ್ದಾರೆ. ಅವರು ಎಷ್ಟಕ್ಕೆ ಸೇಲ್ ಆಗಿದ್ದಾರೆ ಎಂಬುದು ಗೊತ್ತಾಗಬೇಕು ಎಂದಾಗ ಇತರ ಶಾಸಕರು 50 ಕೋಟಿ ಎಂದು ಹೇಳಿದ್ದು ಸದನದಲ್ಲಿ ಕೇಳಿಸಿತು.

ಸಾ.ರಾ.ಮಹೇಶ್ ಮುಂದುವರೆಸಿ, ನಾನು ಹೇಳಿದ್ದು ಅಷ್ಟೂ ಸತ್ಯ. ನನ್ನ ತಂದೆ-ತಾಯಿ, ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ಒಂದು ವೇಳೆ ನನ್ನ ಮಾತುಗಳು ಸುಳ್ಳು ಎಂದು ವಿಶ್ವನಾಥ್ ಹೇಳಿದ್ದಾದರೆ ನಾನು ಜೀವನದಲ್ಲಿ ಇನ್ನೆದೂ ಖಾದಿ ಧರಿಸುವುದಿಲ್ಲ. ವಿಶ್ವನಾಥ್ ಕರೆಸಿ ಕೇಳಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಕುಮಾರಸ್ವಾಮಿಯವರು ವಿಶ್ವನಾಥ್ ಅವರು ಜನವರಿಯಲ್ಲಿ ಪತ್ರಿಕಾ ಹೇಳಿಕೆ ನೀಡಿ ಬಿಜೆಪಿಯವರಿಗಿರುವ ಅಧಿಕಾರ ಹಠ, ಚಟ ಸಾಧನೆಯಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಈಗ ಅವರೇ ಬಿಜೆಪಿಯವರ ಜೊತೆ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಆಪರೇಷನ್ ಕಮಲದ ಬಗ್ಗೆ ಯಡಿಯೂರಪ್ಪ ಅವರ ಧ್ವನಿ ಇರುವ ಆಡಿಯೋ ಪ್ರಕರಣದ ತನಿಖೆ ವಿಳಂಬ ಮಾಡಿದ್ದಕ್ಕೆ ನಿಮ್ಮ ಕ್ಷಮೆ ಕೇಳುತ್ತೇನೆ ಎಂದು ಸ್ಪೀಕರ್ ಅವರಲ್ಲಿ ಹೇಳಿದರು.

Facebook Comments