ಶಬರಿಮಲೆ ದೇಗುಲಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಪೆಪ್ಪರ್ ಸ್ಪ್ರೇ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಚ್ಚಿ, ನ.26- ವಿಶ್ವವಿಖ್ಯಾತ ಶಬರಿಮಲೈನ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ತೀವ್ರ ಅಡ್ಡಿಪಡಿಸಿರುತ್ತಿರುವ ಹಿಂದೂ ಸಂಘಟನೆಯೊಂದರ ಸದಸ್ಯನೊಬ್ಬ ಮಹಿಳಾ ಕಾರ್ಯಕರ್ತರೊಬ್ಬರ ಮೇಲೆ ದಾಳಿ ನಡೆಸಿರುವ ಘಟನೆ ಪೊಲೀಸ್ ಆಯುಕ್ತರ ಕಚೇರಿ ಸಮೀಪವೇ ಇಂದು ಬೆಳಗ್ಗೆ ನಡೆದಿದೆ.

ಸ್ವಾಮಿ ಅಯ್ಯಪ್ಪನ ದರ್ಶನ ಪ್ರಾರ್ಥನೆ ಸಲ್ಲಿಸಲು ಶಬರಿಗಿರಿಯತ್ತ ತೆರಳುತ್ತಿದ್ದ ತಂಡದಲ್ಲಿದ್ದ ಮಹಿಳಾ ಹಕ್ಕುಗಳ ರಕ್ಷಣೆ ಕಾರ್ಯಕರ್ತೆ ಬಿಂದು ಅಮ್ಮಿಣಿ ಮೇಲೆ ಪೆಪ್ಪರ್ ಸ್ಪ್ರೇ (ಮೆಣಸಿನ ಪುಡಿ ಎರಚುವಿಕೆ) ಆಕ್ರಮಣ ನಡೆದಿದೆ.

ಸುಪ್ರೀಂಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಎಲ್ಲಾ ವಯೋಮಾನದ ಮಹಿಳೆಯರು ಶಬರಿಮಲೈಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಬಹುದೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತೃಪ್ತಿ ದೇಸಾಯಿ ಜೊತೆ ದೇಗುಲಕ್ಕೆ ಭೇಟಿ ನೀಡಿ ಬಿಂದು ಇತಿಹಾಸ ಸೃಷ್ಟಿಸಿದ್ದರು.

ಬಿಂದು ಮೇಲೆ ಮೆಣಸಿನ ಪುಡಿ ಎಚ್ಚರಿ ದಾಳಿ ನಡೆಸಿದ ಆರೋಪದ ಮೇಲೆ ಶ್ರೀನಾಥ್ ಪದ್ಮನಾಭನ್ ಎಂಬ ಭಕ್ತ ಮತ್ತು ಹಿಂದೂ ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ದಾಳಿಗೊಳಗಾದ ಬಿಂದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಿಂದು ಮೇಲೆ ಪೆಪ್ಪರ್ ಸ್ಪ್ರೇ ದಾಳಿ ನಡೆದ ದೃಶ್ಯಗಳು ಟೆಲಿವಿಷನ್ ಚಾನೆಲ್‍ಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತೃಪ್ತಿ ದೇಸಾಯಿಗೆ ಪೊಲೀಸ್ ರಕ್ಷಣೆ : ದೇವಸ್ಥಾನಕ್ಕೆ ಭೇಟಿ ನೀಡಲು ತೃಪ್ತಿ ದೇಸಾಯಿ ಮತ್ತು ಇತರ ಮಹಿಳಾ ಕಾರ್ಯಕರ್ತರು ಸಹ ಕೊಚ್ಚಿಯಲ್ಲಿದ್ದು, ಅವರ ವಿರುದ್ಧವೂ ಪ್ರತಿಭಟನೆ ನಡೆಯುತ್ತಿದೆ. ಈ ಮಹಿಳಾ ತಂಡ ಆಯ್ಯಪ್ಪ ಸ್ವಾಮಿ ದರ್ಶನ ಪಡೆಯುವುದನ್ನು ವಿರೋಧಿಸಿ ಅಸಂಖ್ಯಾತ ಭಕ್ತರು ಮತ್ತು ಹಿಂದು ಕಾರ್ಯಕರ್ತರು ಕೊಚ್ಚಿ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿದರು. ತೃಪ್ತಿ ದೇಸಾಯಿ ಮೇಲೂ ದಾಳಿ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರ ನೇತೃತ್ವದ ತಂಡಕ್ಕೆ ಪೊಲೀಸ್ ರಕ್ಷಣೆ ನೀಡಲಾಗಿದೆ.

Facebook Comments