ಮಹಿಳೆಯರ ನಿಷೇಧದ ನಡುವೆಯೇ ಶಬರಿ ಮಲೆಗೆ ಹರಿದುಬಂದ ಭಕ್ತ ಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

ಶಬರಿಮಲೆ (ಕೇರಳ), ನ.17- ವಿಶ್ವವಿಖ್ಯಾತ ಶಬರಿಮಲೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನವು ನಿನ್ನೆ ಸಂಜೆಯಿಂದ ಮಂಡಲಪೂಜೆಗೆ ತೆರೆದಿದ್ದು, ಎರಡನೇ ದಿನವಾದ ಇಂದು ಅಪಾರ ಸಂಖ್ಯೆ ಭಕ್ತರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಮುಖ್ಯ ಅರ್ಚಕ ಎ.ಕೆ.ಸುಧೀರ್ ನಂಬೂದಿರಿ ಅವರು ಇಂದು 3 ಗಂಟೆ ನಸುಕಿನಲ್ಲಿ ಗರ್ಭಗುಡಿಯನ್ನು ತೆರೆದು ನೆಯ್ಯಾಭಿಷೇಕಂ ಮತ್ತು ಮಹಾ ಗಣಪತಿ ವಿಶೇಷ ಹೋಮಗಳನ್ನು ಮಾಡಿದರು. ನಂತರ ಮುಂಜಾನೆಯಿಂದ ಸಹಸ್ರಾರು ಭಕ್ತರು ಶ್ರೀಸ್ವಾಮಿ ಅಯ್ಯಪ್ಪನ ದರ್ಶನ ಪಡೆದು ಪ್ರಾರ್ಥನೆ ಸಮರ್ಪಿಸಿದರು.

ಕೇರಳದ ದೇವಸ್ವಂ ಸಚಿವ ಕಡಂಪಲ್ಲಿ ಸುರೇಂದ್ರನ್, ಟ್ರಾವಂಕೂರ್ ದೇವಸ್ವಂ ಮಂಡಳಿ(ಟಿಡಿಬಿ) ಅಧ್ಯಕ್ಷ ಎನ್. ವಾಸು, ಟಿಡಿಬಿ ಸದಸ್ಯರಾದ ಎನ್. ವಿಜಯಕುಮಾರ್ ಮತ್ತು ಕೆ.ಎಸ್.ರವಿ ಹಾಗೂ ದೇವಸ್ವಂ ಆಯುಕ್ತ ಎಂ.ಹರ್ಷನ್ ಸೇರಿದಂತೆ ದೇಗುಲದ ಬಾಗಿಲು ತೆರೆದ ಸಂದರ್ಭದಲ್ಲಿ ಹಾಜರಿದ್ದು ಪೂಜೆ ಸಲ್ಲಿಸಿದರು.

ಕೇರಳ ಪಂಚಾಂಗದ ವೃಶ್ಚಿಕಂ ಮಾಸದ ಮೊದಲ ಪವಿತ್ರ ದಿನವಾದ ನಿನ್ನೆಯಿಂದ ಅಯ್ಯಪ್ಪ ಸ್ವಾಮಿ ದರ್ಶನ ಋತು ಆರಂಭವಾಗಿದ್ದು ಎರಡು ತಿಂಗಳ ಕಾಲ ಮುಂದುವರಿಯಲಿದೆ. ಡಿಸೆಂಬರ್ 27ರವರೆಗೆ ಮಂಡಲಪೂಜೆಗಾಗಿ ದೇವಸ್ಥಾನ ತೆರೆದಿರುತ್ತದೆ.

ನಂತರ ಮೂರು ದಿನಗಳ ಕಾಲ ಮುಚ್ಚಲಾಗುತ್ತದೆ. ತರುವಾಯ ಡಿ.30ರಂದು ದೇಗುಲದ ಬಾಗಿಲು ಮತ್ತೆ ತೆರೆಯಲಿದ್ದು ಮಕರ ವಿಳ್ಳಿಕ್ಕು ಪೂಜೆಗೆ ಚಾಲನೆ ದೊರೆತು ಮಕರ ಜ್ಯೋತಿ ದರ್ಶನದ ನಂತರ ಜ.20ರಂದು ಬಾಗಿಲು ಮುಚ್ಚಲಾಗುತ್ತದೆ.

ಸನ್ನಿಧಾನಂ ಅತಿಥಿ ಗೃಹದಲ್ಲಿ ಇಂದು ಬೆಳಗ್ಗೆ ದೇವಸ್ವಂ ಸಚಿವರು ಉನ್ನತಾಧಿಕಾರಿಗಳ ಸಭೆ ನಡೆಸಿ ಭಕ್ತರಿಗೆ ಸೂಕ್ತ ವ್ಯವಸ್ಥೆ ಮತ್ತು ಭದ್ರತಾ ಏರ್ಪಾಡುಗಳ ಕುರಿತು ಸೂಚನೆ ನೀಡಿದರು.

ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ತೀರ್ಪು ಇದ್ದರೂ, ನಿನ್ನೆ ನಿರ್ದಿಷ್ಟ ವಯೋಮಾನದ ವನಿತೆಯರಿಗೆ ಅಯ್ಯಪ್ಪ ದರ್ಶನ ಅವಕಾಶ ನಿರಾಕರಿಸಿ ಪೊಲೀಸರು ವಾಪಸ್ ಕಳುಹಿಸಿದ್ದರು.

ಇಂದೂ ಕೂಡ ಕೆಲವು ಮಹಿಳೆಯರಿಗೆ ದರ್ಶನ ಲಭ್ಯವಾಗಲಿಲ್ಲ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದೇವಸ್ಥಾನದ ಸುತ್ತಮುತ್ತ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Facebook Comments

Sri Raghav

Admin