ಕ್ರಿಕೆಟ್ ದೇವರು ಸಚಿನ್‍ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ..!

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಜು.19(ಪಿಟಿಐ)- ಭಾರತೀಯ ಕ್ರಿಕೆಟ್ ರಂಗದ ದಂತಕಥೆ ಮತ್ತು ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಹಾಲ್ ಆಫ್ ಫೇಮ್‍ಗೆ ಸೇರಿಸಲಾಗಿದೆ. ಕ್ರಿಕೆಟ್ ದೇವರು ಸಚ್ಚಿನ್ ಅವರೊಂದಿಗೆ ದಕ್ಷಿಣ ಆಫ್ರಿಕಾದ ತಾರೆ ಅಲಾನ್ ಡೊನಾಲ್ಡ್ ಅವರಿಗೂ ಸಹ ಈ ಗೌರವ ನೀಡಲಾಗಿದೆ.

ಐಸಿಸಿ ಹಾಲ್ ಆಫ್ ಫೇಮ್ (ಕ್ರಿಕೆಟ್ ದಿಗ್ಗಜರ ಸಭಾಂಗಣ) ಗೌರವಕ್ಕೆ ಎರಡು ಬಾರಿ ವಿಶ್ವಕಪ್ ಗೆಲುವಿಗೆ ಕಾರಣರಾದ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಪಟು ಕ್ಯಾಥ್ರಿನ್ ಫಿಟ್ಜ್‍ಪ್ಯಾಟ್ರಿಕ್ ಅವರೂ ಕೂಡ ಪಾತ್ರರಾಗಿದ್ದಾರೆ.  ಇಂಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿ ನಡೆದ ಐಸಿಸಿ ಹಾಲ್ ಆಫ್ ಫೇಮ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮಗೆ ಲಭಿಸಿದ ಅಂತಾರಾಷ್ಟ್ರೀಯ ಗೌರವಕ್ಕೆ ಸಿಡಿಲಬ್ಬರದ ಬ್ಯಾಟ್ಸ್‍ಮ್ಯಾನ್ ಆಗಿದ್ದ ಸಚಿನ್ ಅಪಾರ ಸಂತಸ ವ್ಯತ್ತಪಡಿಸಿದರು.

ಐಸಿಸಿ ಹಾಲ್ ಆಫ್ ಫೇಮ್‍ಗೆ ನನ್ನನ್ನು ಸೇರಿಸಿರುವುದು ನನಗೆ ಸಂದ ಗೌರವವಾಗಿದೆ. ಹಾಲ್ ಆಫ್ ಫೇಮ್‍ನಲ್ಲಿರುವ ಕ್ರಿಕೆಟ್ ದಿಗ್ಗಜರೆಲ್ಲರೂ ಈ ಕ್ರೀಡೆಯ ಬೆಳವಣಿಗೆ ಮತ್ತು ಜನಪ್ರಿಯತೆಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ನನ್ನಿಂದ ಈ ಕ್ಷೇತ್ರಕ್ಕೆ ಆಗಿರುವ ಅಳಿಲು ಸೇವೆಯನ್ನು ಪರಿಗಣಿಸಿ ಈ ದೊಡ್ಡ ಗೌರವ ನೀಡಿರುವುದು ನನಗೆ ತುಂಬಾ ಸಂತಸ ಮೂಡಿಸಿದೆ ಎಂದು ಸಚಿನ್ ಹೇಳಿದ್ದಾರೆ.

ಸುಮಾರು ಎರಡೂವರೆ ದಶಕಗಳ ಕಾಲ ಕ್ರಿಕೆಟ್ ಕ್ಷೇತ್ರದಲ್ಲಿ ನನ್ನ ಪಯಣಕ್ಕೆ ಕಾರಣವಾದ ಕುಟುಂಬದ ಸದಸ್ಯರು, ತರಬೇತುದಾರರು, ಸಹ ಕ್ರಿಕೆಟ್ ಪಟುಗಳು ಮತ್ತು ಅಭಿಮಾನಿಗಳಿಗೆ ನಾನು ಕೃತಜ್ಞತೆ ಸಲ್ಲಿಸುವುದಾಗಿ ಮಾಸ್ಟರ್ ಬ್ಲಾಸ್ಟರ್ ತಿಳಿಸಿದ್ಧಾರೆ.  ಐಸಿಸಿ ಹಾಲ್ ಆಫ್ ಫೇಮ್‍ಗೆ ಸೇರ್ಪಡೆಯಾದ ಭಾರತದ ಆರನೇ ಅಗ್ರಮಾನ್ಯ ಕ್ರಿಕೆಟ್ ಪಟು ಎಂಬ ಹೆಗ್ಗಳಿಕೆಗೂ ಲಿಟಲ್ ಮಾಸ್ಟರ್ ಪಾತ್ರರಾಗಿದ್ದಾರೆ.

ರನ್ ಮೆಷಿನ್ ಸಚಿನ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿದ ಸರದಾರ. 46 ವರ್ಷ ಕ್ರಿಕೆಟಿಂಗ್ ಗಾಡ್ ಟೆಸ್ಟ್ ಪಂದ್ಯಗಳು ಮತ್ತು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ರನ್‍ಗಳನ್ನು ಕಲೆ ಹಾಕಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸರ್ ಡೊನಾಲ್ಡ್ ಬ್ರಾಡ್‍ಮನ್ ಅವರ ದಾಖಲೆಗಳನ್ನು ಹಿಂದಿಕ್ಕಿ ಅನೇಕ ಪ್ರಥಮ ಸಾಧನೆಗಳೊಂದಿಗೆ ಸಚಿನ್ 2013ರಲ್ಲಿ ನಿವೃತ್ತರಾದರು.

ತೆಂಡೂಲ್ಕರ್ ಖಾತೆಯಲ್ಲಿ ಟೆಸ್ಟ್ ಪಂದ್ಯಗಳಿಂದ ಒಟ್ಟು 15,921 ರನ್‍ಗಳು ಹಾಗೂ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ 18,426ರನ್‍ಗಳಿವೆ. ಇವೆರಡೂ ಈಗಲೂ ವಿಶ್ವದಾಖಲೆಯಾಗಿಯೇ ಮುಂದುವರಿದಿದೆ.

Facebook Comments