ಗೋಪಾಲಯ್ಯ ಪರ ಡಿವಿಎಸ್ ಮತಬೇಟೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.22- ಅಭಿವೃದ್ಧಿಯನ್ನೇ ಮಂತ್ರವಾಗಿಸಿಕೊಂಡಿರುವ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರನ್ನು ಈ ಬಾರಿಯೂ ಮತದಾರರು ಗೆಲ್ಲಿಸುವ ಮೂಲಕ ಮಹಾಲಕ್ಷ್ಮಿಲೇ ಔಟ್‍ನ ಸಮಗ್ರ ಅಭಿವೃದ್ದಿಗೆ ಸಹಕರಿಸಬೇಕೆಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮತದಾರರಲ್ಲಿ ಮನವಿ ಮಾಡಿದರು.

ನಂದಿನಿ ಲೇಔಟಿನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ಗೋಪಾಲಯ್ಯ ವೈಯಕ್ತಿಕವಾದ ವರ್ಚಸ್ಸು ಹೊಂದಿದ್ದಾರೆ. ಒಳ್ಳೆ ಪಾರ್ಕ್, ಲಾಫಿಂಗ್ ಕ್ಲಬ್ ಎಲ್ಲಾ ಮಾಡಿಸಿದ್ದಾರೆ. ಎರಡು ಮೂರು ಸಾವಿರಕ್ಕೂ ಹೆಚ್ಚು ಜನ ಇಲ್ಲಿ ವಿಹಾರ ಮಾಡುತ್ತಾರೆ. ಮಹಾಲಕ್ಷ್ಮಿ ಲೇಔಟ್‍ನಲ್ಲಿ ಅವರ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು.

ಈ ಹಿಂದೆ ವಾಮಮಾರ್ಗದಲ್ಲಿ ಯಾರು ಚುನಾವಣೆ ಮಾಡಿದ್ದಾರೆ ಎಂದು ಗೊತ್ತಿದೆ, ಸಿದ್ದರಾಮಯ್ಯ ಈಗ ಏಕಾಂಗಿಯಾಗಿದ್ದಾರೆ. ಅವರ ಹಿಂದೆ ಯಾವೊಬ್ಬ ನಾಯಕರೂ ಇಲ್ಲ.ಹತಾಶರಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ಡಿಸೆಂಬರ್ 5 ರಂದು ನಡೆಯುವ ಉಪ ಚುನಾವಣೆಗಾಗಿ ಜೆಡಿಎಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. 12 ಜನ ಸ್ಟಾರ್ ಪ್ರಚಾರಕರಲ್ಲಿ 8 ಮಂದಿ ದೇವೇಗೌಡರ ಕುಟುಂಬದವರೇ ಆಗಿದ್ದಾರೆ ಎಂದು ಲೇವಡಿ ಮಾಡಿದರು.

ಅಥಣಿ ಮತ್ತು ಹಿರೇಕೆರೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಬಲವಂತವಾಗಿ ಹಿಂದೆ ಸರಿದಿಲ್ಲ, ಒಂದು ಪಕ್ಷದಿಂದ ಟಿಕೆಟ್ ಪಡೆದು ನಿಂತವರನ್ನು ವಾಪಸ್ ತೆಗೆಸೋಕೆ ಅವರೇನು ಎಳೆ ಮಕ್ಕಳಾ ? ಈ ಹಿಂದೆಯೂ ರಾಮನಗರದಲ್ಲಿ ಕುತಂತ್ರ ಮಾಡಿ ಅಭ್ಯರ್ಥಿ ನಾಮಪತ್ರ ತೆಗೆಸಿದ್ದು ಅವರು ನಾನಲ್ಲ, ಇದು ಎಲ್ಲರಿಗೂ ಗೊತ್ತಿದೆ ಎಂದು ಜೆಡಿಎಸ್ ನಾಯಕರ ವಿರುದ್ಧ ಸದಾನಂದಗೌಡ ಕಿಡಿಕಾರಿದ್ದಾರೆ.

ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಮಾತನಾಡಿ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಮತದಾರರು ಜಾತಿ, ಮತ ನೋಡದೆ ನನ್ನನ್ನು ಎರಡು ಬಾರಿ ಗೆಲ್ಲಿಸಿದ್ದಾರೆ. ಈ ಬಾರಿಯೂ ನನಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.  ಕ್ಷೇತ್ರದಲ್ಲಿ ಒಕ್ಕಲಿಗ ಮತಗಳನ್ನು ವಿಭಜಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ಸಾಧ್ಯವಿಲ್ಲ. ನಾನು ಕೂಡ ಒಕ್ಕಲಿಗ ಸಮುದಾಯದಿಂದ ಬಂದವನು. ಕೇಂದ್ರ ಸಚಿವ ಸದಾನಂದಗೌಡ ಕೂಡ ಒಕ್ಕಲಿಗರು. ನಮ್ಮ ಸಮುದಾಯದವರು ಸ್ವಾಭಿಮಾನಿಗಳಾಗಿದ್ದು ಅವರಿಗೆ ಯಾರನ್ನು ಆಯ್ಕೆ ಮಾಡಬೇಕೆಂಬುದು ಗೊತ್ತು ಎಂದು ತಿರುಗೇಟು ನೀಡಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಕ್ಷೇತ್ರಕ್ಕೆ ಚುನಾವಣೆ ಮುಗಿದ ಬಳಿಕ ವಿಶೇಷ ಪ್ಯಾಕೇಜ್ ನೀಡುವ ಭರವಸೆ ಕೊಟ್ಟಿದ್ದಾರೆ. ಬಾಕಿ ಇರುವ ಕಾಮಗಾರಿಗಳು ಮತ್ತು ಯೋಜನೆಗಳನ್ನು ಫಲಿತಾಂಶ ಪ್ರಕಟಗೊಂಡ ನಂತರ ಆರಂಭಿಸುವುದಾಗಿ ತಿಳಿಸಿದರು.

ಈ ವೇಳೆ ಸಚಿವರಾದ ಎಸ್.ಸುರೇಶ್‍ಕುಮಾರ್, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್ ಬಿಬಿಎಂಪಿ ಸದಸ್ಯರು ಮತ್ತಿತರರು ಕ್ಷೇತ್ರಾದ್ಯಂತ ಇಂದು ವಿವಿಧೆಡೆ ಪ್ರಚಾರ ನಡೆಸಿದರು.

Facebook Comments