ರಾಜು ಕ್ಷತ್ರಿಯ ನಿಗಮ ಸ್ಥಾಪನೆ ನಿಶ್ಚಿತ : ಡಿವಿಎಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.25-ಕರ್ನಾಟಕ ರಾಜು ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪನೆಯಾಗುವುದು ನಿಶ್ಚಿತ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು. ನಗರದಲ್ಲಿಂದು ಕರ್ನಾಟಕ ರಾಜು ಕ್ಷತ್ರಿಯ ಸಂಘ ಹಮ್ಮಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಹಾಗೂ ಸಮಸ್ತ ಕ್ಷತ್ರಿಯ ಅಭಿವೃದ್ಧಿ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೀಘ್ರವೇ ರಾಜು ಕ್ಷತ್ರಿಯ ಅಭಿವೃದ್ಧಿ ನಿಗಮ ಕಾರ್ಯರೂಪಕ್ಕೆ ತರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ತರಲಾಗುವುದು ಎಂದರು.

ಹಿಂದುಳಿದ ವರ್ಗಗಳಿಗೆ ಸೇರಿದ ರಾಜು ಕ್ಷತ್ರಿಯ ಸಂಘಕ್ಕೆ ಪ್ರತ್ಯೇಕ ನಿಗಮದ ಅಗತ್ಯವಿದೆ. ಎಲ್ಲಾ ಸಮಾಜಗಳು ಅಭಿವೃದ್ಧಿ ಯಾದರÉ ದೇಶವೂ ಅಭಿವೃದ್ಧಿಯಾಗುತ್ತದೆ. ಎಲ್ಲಾ ರಾಜ್ಯಗಳು ಅಭಿವೃದ್ಧಿಯಾದರೆ, ದೇಶದಲ್ಲಿ ಹೆಚ್ಚಿನ ಅಭಿವೃದ್ಧಿಯಾಗುತ್ತದೆ. ಈ ವಿಚಾರದಲ್ಲಿ ಬಿಜೆಪಿಗೆ ನಂಬಿಕೆ ಇದೆ. ಸಂಕ್ರಾಂತಿ ಬಳಿಕ ರಾಜು ಕ್ಷತ್ರಿಯ ಸಮಾಜದ ಮುಖಂಡರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ನಿಗಮ ಸ್ಥಾಪನೆ ಒತ್ತಡ ಹೇರಲಾಗುವುದು ಎಂದರು.

ದೇಶದ ಏಳಿಗೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆ ಸಾಕಷ್ಟಿದೆ. ಅವರ ಆರ್ಥಿಕ ಶಿಸ್ತು ಹಾಗೂ ಆಡಳಿತ ವೈಖರಿ, ದೂರದೃಷ್ಟಿ ಗಮನಾರ್ಹವಾದುದು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಮುನ್ನಡೆಯ ಬೇಕಿದೆ ಎಂದು ಹೇಳಿದರು. ಸಂಸದ ಪಿ.ಸಿ.ಮೋಹನ್ ಮಾತನಾಡಿ, ರಾಜು ಕ್ಷತ್ರಿಯ ನಿಗಮ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ರಾಜು ಕ್ಷತ್ರಿಯ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ರಾಜು ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂಬುದು ಸೇರಿದಂತೆ ಹಲವುಬೇಡಿಕೆಗಳ ಮನವಿಯನ್ನು ಇದೇ ಸಂದರ್ಭದಲ್ಲಿ ರಾಜು ಕ್ಷತ್ರಿಯ ಸಂಘದ ಪರವಾಗಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಯುವಜನ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಬಿಬಿಎಂಪಿ ಉಪಮೇಯರ್ ಸಿ.ಆರ್.ರಾಮ ಮೋಹನ್‍ರಾಜು, ಕರ್ನಾಟಕ ರಾಜು ಕ್ಷತ್ರಿಯ ಸಂಘದ ಅಧ್ಯಕ್ಷ ಎಲ್.ಕೆ.ರಾಜು ಮತ್ತಿತರರು ಉಪಸ್ಥಿತರಿದ್ದರು.

Facebook Comments