ಸಾವಯವ-ನ್ಯಾನೋ ಗೊಬ್ಬರ ಬಳಕೆ ಉತ್ತೇಜನಕ್ಕೆ ಕ್ರಮ: ಸಚಿವ ಸದಾನಂದ ಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.24- ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳಲು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ಹೆಚ್ಚೆಚ್ಚು ಸಾವಯವ ಹಾಗೂ ನ್ಯಾನೋ ಗೊಬ್ಬರ ಬಳಕೆಯನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರು ಹೇಳಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಸಂಸದ ಉದಯ ಪ್ರತಾಪ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅತಿಯಾದ ರಸಗೊಬ್ಬರ ಬಳಕೆಯಿಂದ ಕೃಷಿ ಮಣ್ಣಿನ ಆರೋಗ್ಯ ಹದಗೆಡುತ್ತಿದೆ. ಕೃಷಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಲು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಬೇಕು ಹಾಗೂ ಸಾಂಪ್ರದಾಯಿಕ ಕೃಷಿಗೆ ಒತ್ತು ನೀಡಬೇಕು ಎಂಬುದು ನಮ್ಮ ನೀತಿ. ಆದರೆ ರಸಗೊಬ್ಬರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಕಾಂಪ್ರೋ, ಸಾವ ಯವ ಮತ್ತು ನ್ಯಾನೋ ಗೊಬ್ಬರ ಬಳಕೆಯನ್ನು ಉತ್ತೇಜಿಸ ಬೇಕಿದೆ.

ಈಗಾಗಲೇ ಕೃಷಿ ಇಲಾಖೆಯೊಂದಿಗೆ ಚರ್ಚಿಸಿ ಸಮಗ್ರ ಯೋಜನೆಯೊಂದನ್ನು ರೂಪಿಸಲಾಗಿದೆ. ಸಹಕಾರಿ ವಲಯದ ಗೊಬ್ಬರ ತಯಾರಿಕಾ ಕಂಪನಿ ಇಪ್ರೋ ಈಗಾಗಲೇ ನ್ಯಾನೋ ಗೊಬ್ಬರ ಬಳಕೆಗೆ ಕ್ರಮ ಕೈಗೊಂಡಿದೆ. ದೇಶದ ವಿವಿದ ಭಾಗಗಳಲ್ಲಿ 11,000 ರೈತರು ಪ್ರಾಯೋಗಿಕವಾಗಿ ಇಪ್ರೋ ಒದಗಿಸಿದ ನ್ಯಾನೋ ಗೊಬ್ಬರವನ್ನು ಬಳಕೆ ಮಾಡಿದ್ದಾರೆ. ಇದರಿಂದ ಒಂದೆಡೆ ಬೇಸಾಯದ ಖರ್ಚು ಕಡಿಮೆ ಯಾಗಿದೆ. ಇನ್ನೊಂದೆಡೆ ಇಳುವರಿಯೂ ಹೆಚ್ಚಾಗಿದೆ ಎಂದು ವಿವರಿಸಿದರು.

ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ಬಂಡವಾಳ ಹಿಂಪಡೆತದಿಂದ ಬರುವ 400-500 ಕೋಟಿ ರೂಪಾಯಿ ಯನ್ನು ಹಸಿರು ಗೊಬ್ಬರ ಬಳಕೆಯ ಉತ್ತೇಜನಕ್ಕೆ ಬಳಸಬೇಕು ಎಂಬ ಪ್ರಶ್ನೆಗೆ ಸರ್ಕಾರದ ಬಿಸಿನೆಸ್ ಅಲ್ಲ ಎಂದು ಪ್ರಧಾನಿ ಮೋದಿಯವರು ಯಾವತ್ತೂ ಹೇಳುತ್ತಿರುತ್ತಾರೆ. ಅದೇನೇ ಇದ್ದರೂ ಸರ್ಕಾರಿ ವಲಯದ ಈ ಕಂಪನಿಯಲ್ಲಿ ಬಂಡವಾಳ ಹಿಂಪಡೆತದ ಬಗ್ಗೆ ಈವರೆಗೆ ಯಾವುದೇ ನಿರ್ಣಯ ಮಾಡಿಲ್ಲ. ಆದರೆ ಸಂಸದರ ಸಲಹೆಯನ್ನು ಸ್ವೀಕರಿಸುವುದಾಗಿ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಜಗದಾಂಬಿಕ ಪಾಲ್ ಮತ್ತು ವರುಣ ಗಾಂಧಿ ಅವರು ಕೇಳಿದ ಚುಕ್ಕೆ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡರು, ರಸಗೊಬ್ಬರ ಸಬ್ಸಿಡಿಯನ್ನು ರೈತರ ಖಾತೆಗೆ ನೇರ ವರ್ಗಾವಣೆ ಮಾಡುವ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದು ಅದರ ಫಲಶೃತಿಯನ್ನು ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

Facebook Comments