ಬಿಜೆಪಿ ಬಿಟ್ಟು ‘ಕೈ’ಹಿಡಿದ ಚಂದ್ರಶೇಖರ್ ಬಗ್ಗೆ ಡಿವಿಎಸ್ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Sadanandagowda-v-01

ಬೆಂಗಳೂರು,ನ.1-ಸಣ್ಣಪುಟ್ಟ ಆಸೆಗಳಿಗೆ ರಾಮನಗರದ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಶೇಖರ್ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಸೇರಿದ್ದಾರೆ. ಇಂಥವರ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳದಿದ್ದರೆ ರಾಜಕಾರಣ ಇನ್ನಷ್ಟು ಕಲುಷಿತವಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿ ಚಂದ್ರಶೇಖರ್ ಅವರಿಗೆ ಪಕ್ಷ ಎಲ್ಲ ರೀತಿಯ ನೆರವು ನೀಡಿತ್ತು. ಅವರ ಪರವಾಗಿ ಅನೇಕ ಮುಖಂಡರು ಪ್ರಚಾರ ನಡೆಸಿದ್ದರು. ಈಗ ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸ್ವಾರ್ಥಕ್ಕಾಗಿ ಕಾರ್ಯಕರ್ತರನ್ನು ಕಡೆಗಣಿಸಿ ಪಕ್ಷದಿಂದ ಹೊರ ಹೋಗಿರುವವರು ಇನ್ನೊಂದು ಪಕ್ಷದ ಮೇಲೆ ಆರೋಪ ಮಾಡುವುದು ಸರಿಯಲ್ಲ.

ರಾಜಕಾರಣದಲ್ಲಿ ಇಂತಹ ಕ್ರಿಮಿಕೀಟಗಳ ಬಗ್ಗೆ ಎಚ್ಚರದಿಂದಿರಬೇಕು. ಮೊದಲೇ ಜನರು ರಾಜಕಾರಣಿಗಳನ್ನು ಅನುಮಾನದಿಂದ ನೋಡುತ್ತಿದ್ದಾರೆ. ಇವರ ನಡವಳಿಕೆ ಎಲ್ಲರಿಗೂ ತಲೆ ತಗ್ಗಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಸೇರಿದಂತೆ ಅನೇಕರು ರಾಮನಗರದಲ್ಲಿ ಪ್ರಚಾರ ನಡೆಸಿದ್ದೇವೆ. ಈಗ ನನ್ನ ಪರವಾಗಿ ಯಾರೂ ಬಂದಿಲ್ಲ ಎಂದು ಚಂದ್ರಶೇಖರ್ ಆರೋಪಿಸುತ್ತಿರುವುದು ನಗೆಪಾಟಲಿನ ವಿಷಯ. ನೇರವಾಗಿ ನಾನು ಹಣ ತೆಗೆದುಕೊಂಡು ಕಣದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದರೆ ಅಭ್ಯಂತರವೇನಿಲ್ಲ. ಅದನ್ನು ಬಿಟ್ಟು ನನ್ನ ಪರವಾಗಿ ಬಿಜೆಪಿ ನಾಯಕರು ಬರಲೇ ಇಲ್ಲ. ಸಹಾಯ ಮಾಡಲಿಲ್ಲ ಎಂದು ಆರೋಪ ಮಾಡುವುದನ್ನು ಬಿಡಬೇಕು.
ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡಿರುವವರು ಇಂತಹ ಕೆಲಸಗಳನ್ನು ಮಾತ್ರ ಮಾಡುತ್ತಾರೆ ಎಂದು ಸದಾನಂದಗೌಡ ವಾಗ್ದಾಳಿ ನಡೆಸಿದರು.

Facebook Comments