ಸಂಗೀತ ಅಲಾಪ ಮುಗಿಸಿದ ವಾಜಿದ್, ದು:ಖದ ಮಡುವಿನಲ್ಲಿ ಮುಳುಗಿದ ಬಾಲಿವುಡ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ 1- ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‍ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ (42) ಇಂದು ಬೆಳಗ್ಗೆ ಚೆಂಬೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಸಾಜಿದ್- ವಾಜಿದ್ ಎಂದೇ ಪ್ರಸಿದ್ಧರಾಗಿದ್ದ ವಾಜಿದ್‍ಖಾನ್ ಸಂಗೀತ ನಿರ್ದೇಶಕರಾಗಿ ಮಾತ್ರವಲ್ಲದೆ, ಸಾಹಿತ್ಯ, ಗಾಯಕನಾಗಿಯೂ ಗುರುತಿಸಿ ಕೊಂಡಿದ್ದರು.

ಸಲ್ಮಾನ್‍ಖಾನ್ ಅಭಿನಯದ ಪ್ಯಾರ್‍ಕಿಯಾ ತೋ ಡರ್‍ನಾ ಕ್ಯಾ ಚಿತ್ರದ ತೇರಿ ಜವಾನಿ ಗೀತೆಗೆ ಸಂಗೀತ ನೀಡುವ ಮೂಲಕ ಬೆಳಕಿಗೆ ಬಂದ ವಾಜಿದ್ ಖಾನ್ ನಂತರ ಸಲ್ಮಾನ್‍ಖಾನ್ ನಟಿಸಿದ್ದ ಹಲೋ ಬ್ರದರ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾದ ನಂತರ ಬಾಲಿವುಡ್‍ನಲ್ಲಿ ಖ್ಯಾತ ನಿರ್ದೇಶಕರಾಗಿ ಬೆಳೆದರು.

ಸಲ್ಮಾನ್‍ಖಾನ್ ಅಭಿನಯಿಸಿದ್ದ ದಬಾಂಗ್, ಪಾರ್ಟನರ್, ವಾಂಟೆಡ್, ಏಕ್ ಥಾ ಟೈಗರ್, ವೀರ್ ಸೇರಿದಂತೆ 50 ಕ್ಕೂ ಹೆಚ್ಚು ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ್ದ ವಾಜಿದ್‍ಖಾನ್ ಜೋಡಿ ಇತ್ತೀಚೆಗೆ ತ್ರಿದೇವ್ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದರು.

2008ರಲ್ಲಿ ಬಿಡುಗಡೆಗೊಂಡ ಪಾರ್ಟ್‍ನರ್ ಚಿತ್ರದ ಡು ಯು ವಾನಾ ಪಾರ್ಟನರ್ ಎಂಬ ಗೀತೆ ಮೂಲಕ ಗಾನಸುಧೆ ಹರಿಸಿದ ವಾಜಿದ್‍ಖಾನ್ 25ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಲ್ಲದೆ, ದೀವಾನಾ, ಕೊಯಾ ಕೊಯಾ ಚಾಂದ್, ತೇರಾ ಇಂತಿಜಾರ್ ಆಲ್ಬಂಗಳಿಗೆ ಸಂಗೀತ ನೀಡಿದ್ದಾರೆ. ಆಗ್, ಜೈಯೋ, ದಬಾಂಗ್2 ಸೇರಿದಂತೆ ಹಲವು ಚಿತ್ರಗಳಿಗೆ ಸಾಹಿತ್ಯ ರಚಿಸಿದ್ದಾರೆ.

ದಬಾಂಗ್ ಸಿನಿಮಾದ ಸಂಗೀತಕ್ಕಾಗಿ ಮಿರ್ಚಿ ಮ್ಯುಸಿಕ್ ಅವಾರ್ಡ್ ಗೆದ್ದಿದ್ದ ವಾಜಿದ್‍ಖಾನ್‍ಗೆ ಫಿಲಂಫೇರ್ ಅವಾರ್ಡ್, ಜೀ ಸಿನಿಮಾ ಅವಾರ್ಡ್, ಗೀಮಾ ಅವಾರ್ಡ್, ಬಿಗ್‍ಸ್ಟಾರ್, ಫ್ರೇಡ್ ಆಫ್ ಇಂಡಿಯಾ ಪ್ರಶಸ್ತಿಗಳು ಲಭಿಸಿವೆ.

ಬಿಗ್‍ಬಾಸ್ ಹಿಂದಿ ಆವೃತ್ತಿಯ 4 ಮತ್ತು 6ರ ಆವೃತ್ತಿಗೆ ಸಂಗೀತ ಒದಗಿಸಿದ್ದ ವಾಜಿದ್‍ಖಾನ್, ಐಪಿಎಲ್ 4ಕ್ಕೆ ಥೀಮ್ ಸಾಂಗ್ ಸಿದ್ಧಪಡಿಸಿದ್ದರಲ್ಲದೆ, 2012ರ ಸರೆಗಮಪ ರಿಯಾಲ್ಟಿ ಶೋನ ಮೆಂಟರ್ಸ್‍ಗಳಾಗಿದ್ದರು. ಕಳೆದ ತಿಂಗಳಿನಲ್ಲಷ್ಟೇ ಬಾಲಿವುಡ್‍ನ ಖ್ಯಾತ ಕಲಾವಿದ ರಾದ ಇರ್ಫಾನ್‍ಖಾನ್ ಹಾಗೂ ರಿಷಿಕಪೂರ್‍ರನ್ನು ಬಾಲಿವುಡ್ ಕಳೆದುಕೊಂಡಿತ್ತು.

#ಸಂತಾಪ:
ಸದಾ ಹಸನ್ಮುಖಿಯಾಗಿರುತ್ತಿದ್ದ ಸಂಗೀತ ನಿರ್ದೇಶಕ ವಾಜಿದ್‍ಖಾನ್‍ರ ಸಾವಿನ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಗಿದೆ, ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಬಿಗ್‍ಬಿ ಅಮಿತಾಬ್‍ಬಚ್ಚನ್ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿ ದ್ದಾರೆ.
ಬಾಲಿವುಡ್‍ನ ಖ್ಯಾತ ಕಲಾವಿದರಾದ ಸಲ್ಮಾನ್‍ಖಾನ್, ಅರ್ಬಾಜ್‍ಖಾನ್ ಪ್ರಿಯಾಂಕಾ ಚೋಪ್ರಾ, ಪ್ರೀತಿಜಿಂಟಾ, ಪರಿಣೀತಿ ಚೋಪ್ರಾ, ವರುಣ್‍ಧವನ್, ಕರಣ್ ಜೋಹರ್, ಖ್ಯಾತ ಗಾಯಕ ಶಂಕರ್‍ಮಹದೇವನ್ ಮುಂತಾದವರು ಸಂತಾಪ ಸೂಚಿಸಿದ್ದಾರೆ.

Facebook Comments