ವಾರಕ್ಕೊಮ್ಮೆ ಸಕಾಲ ಅರ್ಜಿಗಳ ಪ್ರಗತಿ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ಪ್ರತಿ ಶನಿವಾರ ಸಕಾಲ ಸೇವೆಗಳ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಸಕಾಲ ಮಿಷನ್‍ನ ಅಪರ ನಿರ್ದೇಶಕರಾದ ಡಾ.ಬಿ.ಆರ್.ಮಮತಾ ಸೂಚಿಸಿದರು. ನಗರದ ಜಯನಗರ 4ನೇ ಬ್ಲಾಕ್‍ನ ಬಿಡಿಎ ವಾಣಿಜ್ಯ ಸಂಕೀರ್ಣದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಾಯಕ ಕಂದಾಯ ಅಧಿಕಾರಿ (ಎಆರ್‍ಒ) ಕಚೇರಿಗೆ ಭೇಟಿ ನೀಡಿ ಸಕಾಲ ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.

ಸಕಾಲದಡಿ ಸ್ವೀಕರಿಸುವ ಅರ್ಜಿಗಳು ಹೆಚ್ಚು ತಿರಸ್ಕøತವಾಗಬಾರದು ಅರ್ಜಿ ಸ್ವೀಕರಿಸುವ ಸಂದರ್ಭ ದಲ್ಲೇ ಪರಿಶೀಲಿಸಿ ಅರ್ಜಿಯನ್ನು ಪಡೆಯಬೇಕು. ಒಂದು ವೇಳೆ ತಿರಸ್ಕøತವಾಗುವಂತಿದ್ದರೆ 24 ಗಂಟೆಯೊಳಗೆ ಅರ್ಜಿದಾರರಿಗೆ ತಿಳಿಸಬೇಕು. ಯಾವ ಕಾರಣಕ್ಕೆ ತಿರಸ್ಕøತವಾಗಿದೆ ಎಂಬ ಮಾಹಿತಿಯನ್ನು ನೀಡಬೇಕು. ಅರ್ಜಿ ತಿರಸ್ಕರಿಸಿದರೆ ಅದರ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಅಳವಡಿಸಿ ಮೇಲ್ಮನವಿ ವಿವರಗಳನ್ನೂ ನೀಡಬೇಕು. ಅರ್ಜಿ ಸ್ವೀಕರಿಸಿದ ಸಂದರ್ಭದಲ್ಲೇ ಸ್ವೀಕೃತಿ ಸಂಖ್ಯೆಯನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸಹಾಯಕ ಕಂದಾಯ ಅಧಿಕಾರಿ (ಎಆರ್‍ಒ) ಕಚೇರಿಯಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ಶೇ.35 ರಷ್ಟು ಅರ್ಜಿಗಳು ತಿರಸ್ಕøತವಾಗಿರುವುದು ಗಮನಕ್ಕೆ ಬಂದಿತು. ಅದಕ್ಕೆ ಸಮರ್ಪಕ ಕಾರಣ ನೀಡಲು ವಿಫಲರಾದ ಎಆರ್‍ಒ ಹುಚ್ಚಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಮಮತಾ ಅವರು, ಸಕಾರಣವಿಲ್ಲದೇ ಅರ್ಜಿಗಳನ್ನು ತಿರಸ್ಕಾರ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ನಂತರ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉಪ ತಹಶೀಲ್ದಾರ್ ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಕಾಲ ಆಡಳಿತ ಅಧಿಕಾರಿ ಸೀಮಾ, ಸಾರಿಗೆ ಜಂಟಿ ಆಯುಕ್ತ ಹಾಲಸ್ವಾಮಿ, ಉಪ ತಹಶೀಲ್ದಾರ್ ರಾಘವೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Facebook Comments