ಸಚಿವ ಯೋಗೇಶ್ವರ್ ಅವರ 9 ಕೋಟಿ ರೂ. ಸಾಲದ ತನಿಖೆಯಾಗಲಿ : ಸಲೀಂ ಅಹಮ್ಮದ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.15- ಸರ್ಕಾರ ರಚನೆ ವೇಳೆ ಸಿ.ಪಿ.ಯೋಗೇಶ್ವರ್ 9 ಕೋಟಿ ರೂ. ಸಾಲ ಮಾಡಿಕೊಂಡಿದ್ದರು ಎಂದು ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತು ತನಿಖೆ ನಡೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಆಗ್ರಹಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಆಪರೇಷನ್ ಕಮಲನಡೆಸಿದೆ, ಹಣದ ವಹಿವಾಟು ನಡೆದಿದೆ. ದುಡ್ಡುಕೊಟ್ಟು ಶಾಸಕರನ್ನು ಖರೀದಿ ಮಾಡಲಾಗಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಆದರೆ, ಯಾವುದೇ ಹಣಕಾಸಿನ ವಹಿವಾಟು ನಡೆದಿಲ್ಲ ಎಂದು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿದ್ದರು.

ಈಗ ಅವರದ್ದೇ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದು, ನಾವೆಲ್ಲ ಬಾಂಬೆಯಲ್ಲಿ ಸುತ್ತಾಡುವಾಗ ನಮ್ಮನ್ನು ಒಟ್ಟುಗೂಡಿಸುವ ಸಂದರ್ಭದಲ್ಲಿ ಯೋಗೇಶ್ವರ್ 9 ಕೋಟಿ ರೂ. ಸಾಲ ಮಾಡಿದ್ದರು.

ಈಗ ಮಾತನಾಡುವವರು ಆಗ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಸರ್ಕಾರ ರಚನೆ ಸಂದರ್ಭದಲ್ಲಿ ಹಣಕಾಸಿನ ವಹಿವಾಟು ನಡೆದಿರುವುದು ಮತ್ತೊಮ್ಮೆ ದೃಢಪಟ್ಟಿದೆ. ಜವಾಬ್ದಾರಿಯುತ ಸಚಿವರೇ ಮತ್ತೊಬ್ಬ ಸಚಿವರ ಕುರಿತು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ಅವರಿಗೆ 9 ಕೋಟಿ ಯಾವ ಮೂಲದಿಂದ ಬಂತು.

ಯಾರಿಗೆ ಅದನ್ನು ಕೊಟ್ಟರು, ಯಾವಾಗ ಕೊಡಲಾಯಿತು ಎಂಬೆಲ್ಲಾ ವಿಚಾರಗಳ ಕುರಿತು ಸಮಗ್ರ ತನಿಖೆಯಾಗಬೇಕು. ಸಂಪುಟ ವಿಸ್ತರಣೆಯ ಬಳಿಕ ಹಣಕೊಟ್ಟು ಸಚಿವರಾಗಿದ್ದಾರೆ. ಭ್ರಷ್ಟಾಚಾರ ನಡೆದಿದೆ. ನೋಡಲಾಗದ ಸಿಡಿ ತೋರಿಸಿ ಬ್ಲಾಕ್‍ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಲಾಗಿದೆ ಎಂದು ಬಹಳಷ್ಟು ಮಂದಿ ಬಿಜೆಪಿ ನಾಯಕರು, ಶಾಸಕರೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ.

ಈ ಕುರಿತಂತೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯ ಮಾಡಿದ್ದಾರೆ. ಸರ್ಕಾರ ತನಿಖೆಗೆ ಆದೇಶ ಮಾಡಿದರೆ ಆ ಸಮಿತಿಯ ಮುಂದೆ ಕಾಂಗ್ರೆಸ್ ತಮ್ಮ ಬಳಿ ಇರುವ ಮಾಹಿತಿಯನ್ನು ನೀಡಲಿದೆ.

ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸಿಗರ ಬಳಿ ಸಿಡಿ ಇದೆ. ಅದನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಸಮಿತಿ ರಚಿಸಲು ಅದರ ಮುಂದೆ ನಮ್ಮ ಬಳಿ ಇರುವ ಮಾಹಿತಿ ನೀಡುತ್ತೇವೆ ಎಂದು ಸಲಿಂ ಅಹಮ್ಮದ್ ಹೇಳಿದರು.

ರಮೇಶ್ ಜಾರಕಿಹೊಳಿ ಅವರು ಸಿ.ಪಿ.ಯೋಗೇಶ್ವರ್ ಕುರಿತಂತೆ ನೀಡಿರುವ ಹೇಳಿಕೆಯ ಬಗ್ಗೆಯೂ ತನಿಖೆಯಾಗಬೇಕು. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ, ಸಿಬಿಐನಂತಹ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು.

Facebook Comments