ರಾಜ್ಯದಲ್ಲಿ ತೆರೆಯಲಿವೆ ಸರ್ಕಾರೀ ಕ್ಷೌರಿಕ ಅಂಗಡಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.21-ರಾಜ್ಯದಲ್ಲಿ ಹೆಚ್ಚುತ್ತಿರುವ ಜಾತಿ ತಾರತಮ್ಯವನ್ನು ತೊಲಗಿಸಲು ದೃಢಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಕ್ಷೌರಿಕ ಅಂಗಡಿಗಳನ್ನು  (ಸೆಲೂನ್‍ಶಾಪ್) ತೆರೆಯಲು ಮುಂದಾಗಿದೆ.  ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಈ ಕ್ಷೌರದಂಗಡಿಗಳು ಆರಂಭವಾಗಲಿದ್ದು, ಸರ್ಕಾರವೇ ಇದರ ನಿರ್ವಹಣೆ ಮಾಡಲಿದೆ.

ಇತ್ತೀಚೆಗೆ ದಲಿತರು ಹಾಗೂ ಕೆಲವು ನಿರ್ದಿಷ್ಟ ಸಮುದಾಯಕ್ಕೆ ಗ್ರಾಮೀಣ ಭಾಗಗಳಲ್ಲಿ ಕ್ಷೌರ ಮಾಡಲು ಹಿಂದೇಟು ಹಾಕಿದ ನಿದರ್ಶನಗಳು ಮರುಕಳಿಸುತ್ತಲೇ ಇದೆ. ಈ ತಾರತಮ್ಯವನ್ನು ಹೋಗಲಾಡಿಸಲು ಸರ್ಕಾರ ಇಲಾಖೆ ವತಿಯಿಂದಲೇ ಅಂಗಡಿಗಳನ್ನು ತೆರೆಯಲಿದೆ.
ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ಕೆಲವು ಕಡೆ ಜಾತಿ ಹೆಸರಿನ ಕಾರಣದಿಂದ ಸೇವೆಗಳನ್ನು ಬಹಿಷ್ಕರಿಸುತ್ತಿರುವ ಅಂಶವನ್ನು ಅಕಾರಿಗಳು ಗಮನಕ್ಕೆ ತಂದಿದ್ದರು.

ಜಾತಿ ಅಥವಾ ಇನ್ಯಾವುದೋ ಕಾರಣಕ್ಕಾಗಿ ರ್ನಿಷ್ಟ ಸಮುದಾಯಕ್ಕೆ ಕೆಲವು ಕಡೆ ಕ್ಷೌರದ ಸೇವೆಗಳನ್ನು ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಅಂಗಡಿಯವರು ಅವರಿಗೆ ಕ್ಷೌರ ಮಾಡಿದರೆ ಮೇಲ್ಜಾತಿಯವರು ಬರುವುದಿಲ್ಲ. ಹೀಗಾಗಿ ಇದನ್ನು ತಡೆಗಟ್ಟುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಯಡಿಯೂರಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ವತಿಯಿಂದಲೇ ಅಂಗಡಿಗಳನ್ನು ತೆರೆಯಬೇಕು. ಇಲ್ಲಿ ಹೊರಗುತ್ತಿಗೆ ಇಲ್ಲವೇ ನೇರನೇಮಕಾತಿ ಮಾಡಿಕೊಂಡು ಅವರಿಗೆ ಅಗತ್ಯವಿರುವಷ್ಟು ಇಲಾಖೆ ವತಿಯಿಂದ ತಿಂಗಳ ವೇತನ ನೀಡಬೇಕೆಂದು ಸೂಚನೆ ಕೊಟ್ಟಿದ್ದಾರೆ.

ತಕ್ಷಣಕ್ಕೆ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೆ ಅಗತ್ಯವಿರುವ ಕಡೆ ಕಟ್ಟಡಗಳನ್ನು ಬಾಡಿಗೆ ಪಡೆಯಬೇಕು. ನಂತರ ಜಮೀನಿನ ಲಭ್ಯತೆ ನೋಡಿಕೊಂಡು ಶಾಶ್ವತ ಕಟ್ಟಡಗಳನ್ನು ನಿರ್ಮಾಣ ಮಾಡಬೇಕೆಂದು ಅಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.  ಜಾತಿ ಕಾರಣಕ್ಕಾಗಿ ಯಾರಿಗಾದರೂ ಸೇವೆಗಳನ್ನು ಒದಗಿಸಲು ಹಿಂದೇಟು ಹಾಕಿದರೆ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ. ಅಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ.

ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಅಕಾರಿಗಳು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕ್ಷೌರದ ಅಂಗಡಿಗಳನ್ನು ತೆರೆಯಲು ಸಿದ್ದತೆ ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಇತ್ತೀಚೆಗೆ ರ್ನಿಷ್ಟ ಸಮುದಾಯದವರಿಗೆ ಕ್ಷೌರ ಮಾಡಲು ಹಿಂದೇಟು ಹಾಕಿದ ಘಟನೆಗಳು ನಡೆಯುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈ ಅಸಮಾನತೆಯನ್ನು ಹೋಗಲಾಡಿಸಲು ದಿಟ್ಟ ಕ್ರಮ ಕೈಗೊಂಡಿದೆ.

Facebook Comments