ಎನ್‍ಸಿಬಿ ಅಧಿಕಾರಿ ಸಮೀರ್ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.27- ಹೈಪ್ರೋಫೈಲ್ ಡ್ರಗ್ಸ್ ಪ್ರಕರಣದಲ್ಲಿ ಕೇಂದ್ರ ಜಾಗೃತ ದಳದ ಐವರು ಅಧಿಕಾರಿಗಳ ತಂಡ ಎನ್‍ಸಿಬಿ ವಲಯ ನಿರ್ದೇಶಕ ಸಮೀರ್ ವಾಂಕೇಡೆಯವರನ್ನು ವಿಚಾರಣೆಗೆ ಒಳಪಡಿಸಿದೆ. ಬಾಲಿವುಡ್ ನಟ ಶಾರುಕ್‍ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಳಿಕ ಮಾದಕ ವಸ್ತುಗಳ ಪ್ರಕರಣ ವಿಚಿತ್ರ ತಿರುವುಗಳನ್ನು ಪಡೆದುಕೊಂಡಿದೆ.

ಮಹಾರಾಷ್ಟ್ರದ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ನವಾಬ್ ಮಲ್ಲಿಕ್ ನಿರಂತರವಾಗಿ ಆರೋಪಗಳ ಸುರಿಮಳೆ ಮಾಡುತ್ತಿದ್ದಾರೆ. ಸಮೀರ್ ವಾಂಕೇಡೆ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಬಳಕೆ ಮಾಡಿ ಸರ್ಕಾರಿ ಉದ್ಯೋಗ ಗಿಟ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಮುಖವಾಗಿ ಆರ್ಯನ್ ಖಾನ್ ವಿರುದ್ಧ ಕ್ರಮ ಜರುಗಿಸದಿರಲು ಸಮೀರ್ 25 ಕೋಟಿ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಈ ಆರೋಪ ಕುರಿತಂತೆ ಎನ್‍ಸಿಬಿಯ ಜಾಗೃತ ದಳದ ಐವರು ಅಧಿಕಾರಿಗಳ ತಂಡ ದೆಹಲಿಯಿಂದ ಮುಂಬೈಗೆ ಆಗಮಿಸಿದ್ದು, ಸಮೀರ್ ಅವರ ಹೇಳಿಕೆಯನ್ನು ದಾಖಲಿಸಿದೆ. ಸಮೀರ್ ಅವರ ವಿರುದ್ಧ ಕೇಳಿ ಬಂದಿರುವ ಎಲ್ಲಾ ಆರೋಪಗಳ ಕುರಿತು ಜಾಗೃತ ದಳ ತನಿಖೆ ನಡೆಸಬೇಕು ಎಂದು ಸಚಿವ ನವಾಬ್ ಮಲ್ಲಿಕ್ ಒತ್ತಾಯಿಸಿದ್ದಾರೆ. ನಾನು ಸತ್ಯವನ್ನು ಹೊರ ತೆಗೆಯಲು ಹೋರಾಟ ನಡೆಸುತ್ತಿದ್ದೇನೆ ಎಂದು ಅವರ ತಮ್ಮ ಹೋರಾಟವನ್ನು ಸಮರ್ಥಿಸಿಕೊಂಡಿದ್ದಾರೆ.

ಅಕ್ಟೋಬರ್ 2ರಂದು ಮುಂಬೈನಿಂದ ಗೋವಾಕ್ಕೆ ಹೊರಟ್ಟಿದ್ದ ಐಶರಾಮಿ ಹಡಗಿನಲ್ಲಿ ಗಡ್ಡದಾರಿಯೊಬ್ಬ ತನ್ನ ಸ್ನೇಹಿತೆಯೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಇದೆ. ಪ್ರಕರಣದಲ್ಲಿ ಆತನನ್ನು ಏಕೆ ಬಂಧಿಸಿಲ್ಲ. ಆತ ಡ್ರಗ್ಸ್ ಮಾಫೀಯಾದ ಕಿಂಗ್ ಪಿನ್ ಎಂದು ಹೇಳಲಾಗುತ್ತಿದೆ. ಎನ್‍ಸಿಬಿ ಅಧಿಕಾರಿ ಸಮೀರ್ ವಾಂಕೇಡೆ ಅವರು ಗೋವಾ ಮೂಲದ ಡ್ರಗ್ಸ್ ಮಾಫೀಯಾ ಬಗ್ಗೆ ಸದಾ ಕಾಲ ಕಣ್ಣು ಮುಚ್ಚಿಕೊಂಡು ಕೆಲಸ ಮಾಡುತ್ತಾರೆ ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ.

ಈ ನಡುವೆ ಮಹಾರಾಷ್ಟ್ರದ ಪೊÇಲೀಸರು ಸಮೀರ್ ವಾಂಕೇಡೆ ವಿರುದ್ಧ ಕೇಳಿ ಬಂದಿರುವ ಆರೋಪಗಳ ತನಿಖೆಗೆ ಮುಂದಾಗಿದ್ದಾರೆ. ಲಂಚದ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪ ಮಾಡಿರುವ ಪ್ರಭಾಕರ್ ಸಾಲಿ ಅವರ ಹೇಳಿಕೆಯನ್ನು ಮುಂಬೈನ ಡಿಸಿಪಿ ಹಂತದ ಅಧಿಕಾರಿಯ ಸಮ್ಮುಖದಲ್ಲಿ ದಾಖಲು ಮಾಡಿಕೊಳ್ಳಲಾಗಿದೆ.

ಒಂದೆಡೆ ಜಾಗೃತ ದಳದ ಉಪಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್ ಅವರ ತಂಡ ವಿಚಾರಣೆ ನಡೆಸುತ್ತಿದ್ದರೆ, ಇತ್ತ ರಾಜ್ಯ ಪೆÇಲೀಸರು ತನಿಖೆಗೆ ಮುಂದಾಗಿರುವುದರಿಂದ ಸಾಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ.

ಸಮೀರ್ ಮೇಲೆ ಹೊಸದೊಂದು ಆರೋಪ ಕೇಳಿ ಬಂದಿದ್ದು, ಮತ್ತೊಬ್ಬ ಸಾಕ್ಷಿದಾರ ಶೇಖರ್ ಕಾಂಬ್ಲೆ ಅವರು ತಮ್ಮಿಂದ ಸುಮಾರು 10-12 ಖಾಲಿ ಪತ್ರಗಳಿಗೆ ಎನ್‍ಸಿಬಿ ಅಧಿಕಾರಿಗಳು ಸಹಿ ಹಾಕಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಖರಘರ್‍ನಲ್ಲಿ ನೈಜಿರಿಯನ್ ಪ್ರಜೆಯೊಬ್ಬರನ್ನು ಬಂಧಿಸಿದ ಪ್ರಕರಣದಲ್ಲಿ ಪಂಚನಾಮೆಯ ಖಾಲಿ ಹಾಳೆಗಳಿಗೆ ತಮ್ಮಿಂದ ಸಹಿ ಹಾಕಿಸಿಕೊಳ್ಳಲಾಗಿದೆ. ಯಾರ ಮುಂದೆಯೂ ಈ ವಿಷಯ ಬಾಯಿ ಬಿಡಬಾರದು ಎಂದು ವಾಟ್ಸ್‍ಅಪ್ ಕಾಲ್‍ನಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

Facebook Comments