ನವಾಬ್ ಮಲ್ಲಿಕ್ ವಿರುದ್ಧ ಯಾಸ್ಮೀನ್ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.28- ಹೈಪ್ರೋಫೈಲ್ ಡ್ರಗ್ಸ್ ಪ್ರಕರಣದಲ್ಲಿ ಎನ್‍ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಕೇಡೆ ವಿರುದ್ಧ ವಾಕ್‍ದಾಳಿ ನಡೆಸುತ್ತಿರುವ ಮಹಾರಾಷ್ಟ್ರದ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ನವಾಬ್ ಮಲ್ಲಿಕ್ ವಿರುದ್ಧ ಯಾಸ್ಮೀನ್ ಮಲ್ಲಿಕ್ ಪೊಲೀಸರಿಗೆ ದೂರು ನೀಡಿದ್ದಾರೆ.ಯಾಸ್ಮೀನ್ ಅವರು ಕಳೆದ ವಾರ ಎರಡು ಪುಟಗಳ ದೂರು ನೀಡಿರುವುದನ್ನು ಪೊಲೀಸರು ಖಚಿತ ಪಡಿಸಿದ್ದಾರೆ. ಆದರೆ ಅದರ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಸಮೀರ್ ವಾಂಕೇಡೆ ಅವರು ಮಾಲ್ಡೀವ್ಸ್‍ಗೆ ಕುಟುಂಬ ಸಮೇತ ಪ್ರವಾಸ ತೆರಳಿದ್ದರು. ಅದನ್ನು ನವಾಬ್ ಮಲ್ಲಿಕ್ ಹಣ ಸುಲಿಗೆ ಮಾಡಿ ನಡೆಸಿದ ಪ್ರವಾಸ ಎಂದು ಟೀಕಿಸಿದರು. ಜೊತೆಗೆ ಸುಲಿಗೆ ಮಾಡಿಯೇ ದುಬೈ ಪ್ರವಾಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ತಮ್ಮ ಆರೋಪ ಸಾಬೀತು ಪಡಿಸಿಕೊಳ್ಳಲು ನವಾಬ್ ಮಲ್ಲಿಕ್, ಸಮೀರ್ ಅವರ ಸಹೋದರಿ ಯಾಸ್ಮೀನ್ ಅವರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದ ಫೋಟೋವನ್ನು ಬಳಕೆ ಮಾಡಿಕೊಂಡಿದ್ದರು.

ಯಾಸ್ಮೀನ್ ದೂರಿನಲ್ಲಿ ನವಾಬ್ ಮಲ್ಲಿಕ್ ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಮಾನ ಹಾನಿಯಾಗುವಂತ ಹೇಳಿಕೆ ನೀಡುತ್ತಿದ್ದಾರೆ. ಸಾಮಾಜಿಕಜಾಲತಾಣದಲ್ಲಿ ತಾವು ಪ್ರಕಟಿಸಿ ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ಮಹಿಳೆಯ ಖಾಸಗಿತನ ಹಾಗೂ ಘನತೆಗೆ ಧಕ್ಕೆ ತಂದಿದ್ದಾರೆ.

ಅವರ ವಿರುದ್ಧ ಎಸ್‍ಸಿಎಸ್‍ಟಿ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು ಎಂದು ಯಾಸ್ಮೀನ್ ದೂರಿದ್ದಾರೆ. ದೂರು ಆಧರಿಸಿ ಕ್ರಮ ಜರುಗಿಸಲು ಸೂಚಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಯಾಸ್ಮೀನ್ ದೂರು ನೀಡಿದ್ದಾರೆ.

ಜೊತೆಗೆ ಸಮೀರ್ ಅವರ ಪತ್ನಿ ಕ್ರಾಂತಿ ರೆದ್ಕರ್ ವಾಂಕೇಡೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ತಮ್ಮ ಕುಟುಂಬದ ಮೇಲೆ ನಡೆಯುತ್ತಿರುವ ದಾಳಿಯಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ. ಕ್ರಾಂತಿ ಅವರು ಬರೆದ ಪತ್ರವನ್ನು ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದು, ಉದ್ಧವ್ ಠಾಕ್ರೆ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಮುಂಬೈನಿಂದ ಗೋವಾಕ್ಕೆ ಹೊರಟ್ಟಿದ್ದ ಐಶರಾಮಿ ಹಡಗಿನಲ್ಲಿ ಮಾದಕ ವಸ್ತುಗಳ ಪಾರ್ಟಿ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಎನ್‍ಸಿಬಿ ಅಧಿಕಾರಿಗಳು ಬಾಲಿವುಡ್ ಸ್ಟಾರ್ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದರು. ಹೈಪ್ರೋಫೈಲ್ ಪ್ರಕರಣದಲ್ಲಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಸಮೀರ್ ವಾಂಕೇಡೆ ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರ್ಯಾಚರಣೆಯೇ ನಕಲಿ ಎಂದು ಸಚಿವ ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ.

Facebook Comments