ಸಿಸಿಬಿ ಪೊಲೀಸರಿಂದ ಸಂಪತ್‍ರಾಜ್ ತೀವ್ರ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.18- ಮಾಜಿ ಮೇಯರ್ ಸಂಪತ್‍ರಾಜ್ ಅವರನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೊಳ ಪಡಿಸಿದ್ದಾರೆ. ಡಿಜೆಹಳ್ಳಿಯಲ್ಲಿ ನಡೆದ ಗಲಭೆ ಹಾಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ನಡೆದ ದಾಳಿ ಹಾಗೂ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಪಡಿಸಿ ಹಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬ್ಯಾಪಿಸ್ಟ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಎಲ್ಲಿ ತಲೆ ಮರೆಸಿಕೊಂಡಿದ್ದರು, ಯಾರು ಆಶ್ರಯ ನೀಡಿದ್ದರು, ಪರಾರಿ ಯಾಗಲು ಯಾರ್ಯಾರು ಸಹಾಯ ಮಾಡಿದ್ದರು ಎಂಬಿತ್ಯಾದಿಗಳ ಬಗ್ಗೆ ಸಿಸಿಬಿ ಪೊಲೀಸರು ಸಂಪತ್‍ರಾಜ್ ಅವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದು ಕೊಂಡಿದ್ದಾರೆ.

ಮೊನ್ನೆ ರಾತ್ರಿ ಸಂಪತ್‍ರಾಜ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಸಂಪತ್‍ರಾಜ್ ಅವರ ಆಪ್ತ ಮಾಜಿ ಕಾಪೆರ್ರೇಟರ್ ಜಾಕೀರ್‍ಗಾಗಿ ಸಿಸಿಬಿ ಪೊಲೀಸರ ಒಂದು ತಂಡ ಶೋಧ ನಡೆಸುತ್ತಿದೆ. ಮೊದಲ ಬಾರಿ ಸಿಸಿಬಿ ಪೊಲೀಸರು ಜಾಕೀರ್‍ನನ್ನು ವಿಚಾರಣೆಗೆ ಕರೆಸಿಕೊಂಡು ಮೊಬೈಲ್ ಅನ್ನು ವಶಪಡಿಸಿ ಕೊಂಡಿದ್ದರು. ಎರಡನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಇದುವರೆಗೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ.

Facebook Comments