ಗಲಭೆ ಪ್ರಕರಣ : ಮಾಜಿ ಮೇಯರ್ ಸಂಪತ್‍ರಾಜ್‍ಗೆ ಜಾಮೀನು ಮಂಜೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12- ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮಾಜಿ ಮೇಯರ್ ಸಂಪತ್‍ರಾಜ್ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಂಪತ್‍ರಾಜ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ನಾ ಅವರು ಶರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

ಸಂಪತ್‍ರಾಜ್ ಪರ ವಕೀಲರಾದ ಮಹೇಶ್, ಸಿ.ವಿ.ನಾಗೇಶ್ ಈಗಾಗಲೇ ಎರಡು ಆರೋಪ ಪಟ್ಟಿ ದಾಖಲಿಸಲಾಗಿದೆ. ಆದರೆ, ಪ್ರಬಲ ಸಾಕ್ಷ್ಯಾಧಾರ ಸಲ್ಲಿಸಲಾಗಿಲ್ಲ. ಆರೋಪ ಪಟ್ಟಿಯಲ್ಲಿ ಸಂಪತ್‍ರಾಜ್ ಹೆಸರನ್ನು ತಡವಾಗಿ ದಾಖಲಿಸಲಾಗಿದೆ. ಇದು ರಾಜಕೀಯ ವೈಷಮ್ಯದ ಕೇಸು ಎಂದು ವಾದ ಮಂಡಿಸಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಧೀಶರು ಹಲವು ಶರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದರು.

ಕಳೆದ ಆಗಸ್ಟ್ ತಿಂಗಳಲ್ಲಿ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕರೊಬ್ಬರ ಸಂಬಂಧಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೋಸ್ಟ್‍ವೊಂದರಿಂದ ಕೆರಳಿದ ಸಮುದಾಯವೊಂದರ ಗುಂಪು ತಂಡೋಪತಂಡವಾಗಿ ಬಂದು ಡಿಜೆ ಹಳ್ಳಿ, ಕೆಜಿ ಹಳ್ಳಿ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರಲ್ಲದೆ ಬೆಂಕಿ ಇಟ್ಟು ದಾಂಧಲೆ ಮಾಡಿದ್ದರು.

ಶಾಸಕರ ಮನೆಗೂ ಬೆಂಕಿ ಇಟ್ಟ ಘಟನೆಯೂ ನಡೆದಿತ್ತು. ಈ ಪ್ರಕರಣದಲ್ಲಿ ನೂರಾರು ಜನರ ಬಂಧನವಾಗಿತ್ತು. ಮಾಜಿ ಮೇಯರ್, ಮಾಜಿ ಕಾಪೆರ್ರೇಟರ್ ಸೇರಿದಂತೆ ಹಲವರು ತಲೆಮರೆಸಿಕೊಂಡಿದ್ದರು. ನಂತರ ಅವರನ್ನು ಬಂಧಿಸಲಾಗಿತ್ತು.

Facebook Comments