ಪರಾರಿಯಾದ ಮಾಜಿ ಮೇಯರ್ ಸಂಪತ್‍ರಾಜ್‍ಗಾಗಿ ತೀವ್ರ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.31- ಪರಾರಿಯಾ ಗಿರುವ ಮಾಜಿ ಮೇಯರ್ ಸಂಪತ್‍ರಾಜ್ ಬಂಧನಕ್ಕಾಗಿ ರಚಿಸಲಾ ಗಿರುವ ಸಿಸಿಬಿ ಪೊಲೀಸರ ವಿಶೇಷ ತಂಡ ವೊಂದು ವ್ಯಾಪಕ ಶೋಧ ನಡೆಸಿದೆ.
ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಸಂಪತ್‍ರಾಜ್ ಮತ್ತು ಅವರ ಕುಟುಂಬ ಸದಸ್ಯರ ಮೊಬೈಲ್‍ಗಳು ಸ್ವಿಚ್ ಆಫ್ ಆಗಿವೆ. ಅವರ ಮನೆಯಲ್ಲಿ ಯಾರೂ ಇಲ್ಲ.

ಹಾಗಾಗಿ ಸಂಪತ್‍ರಾಜ್ ಹೊರ ರಾಜ್ಯವೊಂದರಲ್ಲಿ ತಲೆಮರೆಸಿಕೊಂಡಿರುವ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ತಂಡವೊಂದು ಹೊರರಾಜ್ಯಕ್ಕೆ ತೆರಳಿ ಅವರಿಗಾಗಿ ಶೋಧ ನಡೆಸುತ್ತಿದೆ.  ಕೊರೊನಾ ಸೋಂಕು ತಗುಲಿದೆ ಎಂದು ಸಂಪತ್‍ರಾಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿಸಿಬಿ ಪೊಲೀಸರು 2ನೇ ಬಾರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು.

ಅನಾರೋಗ್ಯದ ನೆಪವೊಡ್ಡಿ 2ನೇ ಬಾರಿಯೂ ವಿಚಾರಣೆಗೆ ಹಾಜರಾಗಿರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಪತ್‍ರಾಜ್ ಮೇಲೆ ಸಿಸಿಬಿ ಪೊಲೀಸರು ನಿಗಾ ಇಟ್ಟಿದ್ದರು. ಆದರೆ ಪೊಲೀಸರಿಗೆ ಗೊತ್ತಾಗದ ರೀತಿ ಸಂಪತ್‍ರಾಜ್ ರಾತ್ರೋರಾತ್ರಿ ಡಿಸ್ಚಾರ್ಜ್ ಮಾಡಿಸಿಕೊಂಡು ತಲೆಮರೆಸಿಕೊಂಡಿದ್ದಾರೆ.  ಚಿಕಿತ್ಸೆ ನೀಡುತ್ತಿದ್ದ ಖಾಸಗಿ ಆಸ್ಪತ್ರೆಯವರಿಗೆ ಡಿಸ್ಚಾರ್ಜ್ ವೇಳೆ ತಮಗೆ ತಿಳಿಸುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಇದರ ನಡುವೆಯೇ ಸಂಪತ್‍ರಾಜ್ ಡಿಸ್ಚಾರ್ಜ್ ಮಾಡಿಸಿಕೊಂಡು ತಲೆಮರೆಸಿಕೊಂಡಿದ್ದಾರೆ.

ಇದೀಗ ಆಸ್ಪತ್ರೆಯವರಿಗೆ ನೋಟಿಸ್ ನೀಡಿ ಸಂಪತ್‍ರಾಜ್ ಯಾವಾಗ ಡಿಸ್ಚಾರ್ಜ್ ಆದರು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಕೆಜಿಹಳ್ಳಿ ಮತ್ತು ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಸಂಪತ್‍ರಾಜ್ ಆರೋಪಿ ಎಂದು ಹೇಳಲಾಗಿದೆ.

Facebook Comments