ಸಂಚಾರಿ ವಿಜಯ್ ನಿಧನಕ್ಕೆ ಚಿತ್ರರಂಗ ಕಂಬನಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.15- ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಇಂದು ರವೀಂದ್ರ ಕಲಾಕ್ಷೇತ್ರದ ಬಳಿ ಅಂತಿಮ ದರ್ಶನದ ಬಳಿಕ ಅನೇಕ ಗಣ್ಯರು ವಿಜಯ್ ಅವರ ಗುಣಗಾನ ಮಾಡಿದರು. ಹಿರಿಯ ನಟ ಶಿವರಾಜ್ ಕುಮಾರ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ದೂರ ಆಗುವುದು ಬಹಳ ಕಷ್ಟದ ವಿಷಯ. ವಿಜಯ್ ಸಾವಿನ ಬಗ್ಗೆ ಮಾತನಾಡಲು ಮಾತುಗಳು ಬರುತ್ತಿಲ್ಲ. ಕಿಲ್ಲಿಂಗ್ ವೀರಪ್ಪನ್ ಚಿತ್ರ ಮಾಡಿದ್ದೇವು. 10-12 ದಿನ ಯಲ್ಲಾಪುರದಲ್ಲಿ ಜೊತೆಯಲ್ಲಿದ್ದೇವು. ಅವರಿಗೆ ನಟನೆಯನ್ನು ಹೇಗೆ ಉತ್ತಮ ಪಡಿಸಿಕೊಳ್ಳಬೇಕು ಎಂಬ ಕಲಿಕಾ ಆಸಕ್ತಿ ಇತ್ತು.

ನಾನಲ್ಲ ಅವನಲ್ಲ ಅವಳು ಚಿತ್ರ ನೋಡಿದೆ. ರಾಷ್ಟ್ರ ಪ್ರಶಸ್ತಿ ಏಕೆ ಸಿಗುತ್ತದೆ ಎಂಬುದಕ್ಕೆ ಆ ಚಿತ್ರದ ನಟನೆ ಉತ್ತಮ ಉದಾಹರಣೆ ಎಂದರು.
ಎಲ್ಲರೂ ಹೆಲ್ಮೆಟ್ ಧರಿಸಬೇಕು, ಕಾನೂನು ಮಾಡಿರುವುದು ಜೀವ ರಕ್ಷಣೆಗಾಗಿ. ವಿಜಯ್ ಅವರ ಸಾವನ್ನು ಉದಾಹರಣೆಯಾಗಿಟ್ಟುಕೊಂಡು ಮಾತನಾಡುವುದು ಕಷ್ಟದ ಕೆಲಸ. ಆದರೆ ಎಲ್ಲರೂ ಕಾನೂನು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿ, ನನ್ನ ಜೀವನದಲ್ಲಿ ಈ ರೀತಿಯ ಸಾವನ್ನು ಮೊದಲ ಬಾರಿ ನೋಡಿದ್ದೇನೆ. ಬದುಕಿದ್ದಾರೆ, ಆದರೂ ಸತ್ತಿದ್ದಾರೆ. ಸತ್ತಿದ್ದಾರೆ ಆದರೂ ಬದುಕಿದ್ದಾರೆ ಎಂಬ ಗೊಂದಲ ಬಹಳ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದರು.

ಬಹಳ ಒಳ್ಳೆಯ ವ್ಯಕ್ತಿಯಾಗಿದ್ದ ವಿಜಯ್, ಉದಾಸಿನ ಬಿಟ್ಟು ಕಾನೂನು ಗೌರವಿಸಿ ಹೆಲ್ಮೆಟ್ ಹಾಕಿದ್ದರೆ ಬದುಕಿದ್ದನೇನೋ ಎಂಬ ಆಶಾವಾದವಿತ್ತು.
ವಿಜಯ್ ನಿಧರಾಗಿದ್ದಾರೆ. ಅವರ ಜೊತೆಯಲ್ಲಿ ಸಂಚಾರ ಮಾಡುತ್ತಿದ್ದವನನ್ನು ಕಾಪಾಡಿಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದರು.
ವಿಜಯ್ ನನ್ನ ಜೊತೆಯಲ್ಲಿ ಮೂರ್ನಾಲ್ಕು ವೇದಿಕೆಗಳನ್ನು ಹಂಚಿಕೊಂಡಿದ್ದ. ನಯ ವಿನಯವಂತಿಕೆ ಹೊಂದಿದ್ದ. ಸಿನಿಮಾ, ಧಾರವಾಹಿಗಳಲ್ಲಿ ನಿರ್ದೇಶಕ, ತಾಂತ್ರಿಕತೆಯ ಸಹಾಯದಿಂದ ನಟನೆ ಮಾಡಿ ಬಿಡಬಹುದು. ಆದರೆ ರಂಗಭೂಮಿಯಲ್ಲಿ ಪಳಗಿದವನು ವಿಜಯ್ ಎಂದರು.

ನಿರ್ದೇಶಕ ಗುರುದೇಶಪಾಂಡೆ ಮಾತನಾಡಿ, ಕಳೆದ ವರ್ಷ ಚಿರು. ಈ ವರ್ಷ ವಿಜಯ್ ಅಗಲುವಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಜಂಟಲ್ ಮೆನ್ ಎಂಬ ನನ್ನ ಚಿತ್ರದಲ್ಲಿ ನಟಿಸಿದ್ದರು. ನಮ್ಮ ನಟನಾ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟಿದ್ದರು ಎಂದರು.

ಅಕೈ ಪದ್ಮಶಾಲಿ ಮಾತನಾಡಿ, ನಾನು ಅವನಲ್ಲ, ಅವಳು ಚಿತ್ರದಲ್ಲಿ ನಟಿಸುವ ಮೂಲಕ ತುಳಿತಕ್ಕೆ ಒಳಗಾದ ಲೈಂಗಿಕ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಭಾವನೆಗಳಿಗೆ ಜೀವ ತುಂಬಿದ್ದರು. ಲಿಂಗದೇವರು ನಿರ್ದೇಶಿಸಿ ಈ ಚಿತ್ರದ ಮೂಲಕ ಸಮುದಾಯಕ್ಕೆ ಸಕಾರಾತ್ಮಕ ಶಕ್ತಿಯಾಗಿದ್ದರು ಎಂದರು.

Facebook Comments