ಬಿಗ್ ಬ್ರೇಕಿಂಗ್ ನ್ಯೂಸ್ : ನಟ ಚಿರಂಜೀವಿ ಸರ್ಜಾ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಇಂದು ಸ್ಯಾಂಡಲ್ವುಡ್ ಗೆ ತುಂಬಲಾರದ ನಷ್ಟವಾಗಿದೆ, ವಾಯುಪುತ್ರ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ನಟ ಚಿರಂಜೀವಿ ಸರ್ಜಾ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬರಸಿಡಿಲಿನಂತೆ ಬಂದೆರಗಿದ ಚಿರಂಜೀವಿ ಸಾವಿನ ಸುದ್ದಿ ಚಂದನವನವನ್ನು ದುಃಖದ ಕಡಲಲ್ಲಿ ಮುಳುಗಿಸಿದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಸಾಗರ್​ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನಿರ್ಮಾಪಕ ಕೆ.ಮಂಜು ತಿಳಿಸಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು.

ಸುಮಾರು 22 ಸಿನಿಮಾಗಳಲ್ಲಿ ನಟಿಸಿರುವ ಚಿರು ಸರ್ಜಾ, 2018 ರ ಮೇ ತಿಂಗಳಲ್ಲಿ ಮೇಘನಾ ರಾಜ್​ ಅವರನ್ನು ಮದುವೆಯಾಗಿದ್ದರು. ತಿಲಕ್ ನಗರದ ಅಪೊಲೊ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

1980 ರಂದು ಆಕ್ಟೋಬರ್​ 17ರಂದು ಬೆಂಗಳೂರಿನಲ್ಲಿ ಕಲಾವಿದರ ಕುಟುಂಬದಲ್ಲಿ ಜನಿಸಿದ್ದ ಚಿರಂಜೀವಿ ಸರ್ಜಾ, ವಾಯು ಪುತ್ರ ಚಿತ್ರದ ಮ‌ೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದರು. ಚಿಕ್ಕ ವಯಸ್ಸಿನಲ್ಲಿ ಚಿರಂಜೀವಿ ಸರ್ಜಾ ನಿಧನರಾಗಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

# ಚಿರಂಜೀವಿ ಸರ್ಜಾಗೂ ಕರೋನಾ ಟೆಸ್ಟ್‌ :
ಉಸಿರಾಟದ ತೊಂದರೆಯಿಂದ ನಿಧನರಾದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರಿಗೂ ಕೊರೋನಾ ಪರೀಕ್ಷೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ನಡುವೆ ಬಿಬಿಎಂಪಿ ವೈಧ್ಯಧಿಕಾರಿಗಳು ಈ ಬಗ್ಗೆ ಅಪೋಲೋ ಆಸ್ಪತ್ರೆ ವೈದ್ಯರಿಗೆ ಮಾಹಿತಿ ನೀಡಿದ್ದು, ಮೃತ ದೇಹದಿಂದ ಗಂಟಲು ದ್ರವ ಸಂಗ್ರಹ ಮಾಡಿ ಕೊರೋನಾ ಪರೀಕ್ಷೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

# 2 ವರ್ಷದ ಹಿಂದೆಯಷ್ಟೇ ಮೇಘನಾ ಜೊತೆ ಮದುವೆ :
ಹಿರಿಯ ನಟರಾದ ಪ್ರಮೀಳಾ ಜೋಷಾಯ್ ಮತ್ತು ಸುಂದರರಾಜ್ ದಂಪತಿಯ ಪುತ್ರಿ ನಟಿ ಮೇಘನಾ ರಾಜ್ ಅವರನ್ನು ಪ್ರೀತಿಸಿದ ಚಿರಂಜೀವಿ ಸರ್ಜಾ 2017 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2018 ರ ಮೇ 2 ರಂದು ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಮದುವೆ ಅದ್ದೂರಿಯಾಗಿ ನೆರವೇರಿತ್ತು.

# ದಿಢೀರ್ ಎದೆನೋವು :
ಇಂದು ಮದ್ಯಾಹ್ನ 2 ಗಂಟೆಗೆ ಸುಮಾರಿಗೆ ಕುಟುಂಬದೊಟ್ಟಿಗೆ ಊಟ ಮಾಡುತ್ತಿರುವಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಚಿರಂಜೀವಿ ಸರ್ಜಾ ಅವರನ್ನು ಜಯನಗರದ ಸಾಗರ್​ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಸ್ಪತ್ರೆಗೆ ಕರೆತಂದು ಕೆಲವೇ ನಿಮಿಷದಲ್ಲಿ ಚಿರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಅವರ ತಂದೆಯ ಜತೆ ಕುಳಿತು ಊಟ ಮಾಡುತ್ತಿರುವಾಗ ಅವರಿಗೆ ಲಘು ಹೃದಯಾಘಾತವಾಗಿತ್ತು. ಆಗಲೂ ಕೂಡ ಒಮ್ಮೆ ಆಸ್ಪತ್ರೆಗೆ ಹೋಗಿದ್ದರು ಎನ್ನಲಾಗಿದೆ.

Facebook Comments

Sri Raghav

Admin