ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.2- ಹಿರಿಯ ನಟ ಶಿವರಾಮ್ ಅವರು ತಮ್ಮ ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತೀಚೆಗಷ್ಟೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ದಾಖಲಾಗಿ, ಚೇತರಿಸಿಕೊಂಡು ಮನೆಗೆ ಬಂದಿದ್ದರು. ನಿನ್ನೆ ಅಯ್ಯಪ್ಪ ಸ್ವಾಮಿ ಪೂಜೆಗಾಗಿ ತಯಾರಿ ನಡೆಸಿಕೊಂಡು ತಮ್ಮ ಕೋಣೆಗೆ ಹೋಗಿದ್ದಾಗ ಕುಸಿದು ಬಿದ್ದು ತಲೆಗೆ ಪೆಟ್ಟಾಗಿದೆ.

ತಕ್ಷಣ ಅವರ ಪುತ್ರ ರವಿಶಂಕರ್ ಅವರು ಆಸ್ಪತ್ರೆಗೆ ಕರೆದೊಯ್ದಿದ್ದು, ಸ್ಕ್ಯಾನಿಂಗ್ ವೇಳೆ ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿರುವುದು ಗೊತ್ತಾಗಿದೆ. ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದ್ದು, ವಯಸ್ಸಾದ ಕಾರಣ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಹಲವು ಗಣ್ಯರು ಆಸ್ಪತ್ರೆಗೆ ತೆರಳಿದ್ದು, ಅವರ ಆರೋಗ್ಯ ವಿಚಾರಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟರಾಗಿ ಆಧ್ಯಾತ್ಮಿಕ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಮಾಡಿರುವ ಶಿವರಾಂ ಅವರು ಸದಾ ಲವಲವಿಕೆಯಿಂದ ಇದ್ದರು. ಇತ್ತೀಚೆಗೆ ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡು ಬರುವಾಗ ಅವರ ಕಾರು ಅಪಘಾತವಾಗಿತ್ತು. ಆಗ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

Facebook Comments