ಡ್ರಗ್ಸ್ ಪ್ರಕರಣ : ದಿಗಂತ್-ಐಂದ್ರಿತಾ ವಿಚಾರಣೆ ಅಂತ್ಯ, ಮನೆಗೆ ತೆರಳಿದ ದಂಪತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.16- ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಸಿಬಿಯಿಂದ ನೋಟಿಸ್ ಪಡೆದಿದ್ದ ಸ್ಯಾಂಡಲ್‍ವುಡ್‍ನ ಖ್ಯಾತ ಚಿತ್ರನಟ ದೂದ್‍ಪೇಡ ಖ್ಯಾತಿಯ ದಿಗಂತ್ ಹಾಗೂ ಅವರ ಪತ್ನಿ ಐಂದ್ರಿತಾ ರೇ ಅವರುಗಳನ್ನು ಇಂದು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ ಕೆಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದರು.  ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಗೆ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಆಗಮಿಸಿದ ದಿಗಂತ್ ಹಾಗೂ ಐಂದ್ರಿತಾ ಅವರನ್ನು ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು.

ಸತತ 4 ಗಂಟೆಗಳ ಕಾಲ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ದಂಪತಿಗಳು ಸ್ವಲ್ಪ ಮಟ್ಟಿಗೆ ಒತ್ತಡದಲ್ಲಿದ್ದಂತೆ ಕಂಡುಬಂತು. ಸುಮಾರು 3 ಗಂಟೆ ವೇಳೆಗೆ ಮೊದಲ ಹಂತದ ವಿಚಾರಣೆ ಪೂರ್ಣಗೊಳಿಸಿದ ಸಿಸಿಬಿ ಅಧಿಕಾರಿಗಳು ಪುನಃ ಕರೆದರೆ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಿ ಮನೆಗೆ ಕಳಿಸಿಕೊಟ್ಟಿದ್ದಾರೆ.

ಈಗಾಗಲೇ ಬಂಧಿಸಲ್ಪಟ್ಟಿರುವ ರವಿಶಂಕರ್ ಜೊತೆ ದಿಗಂತ್ ಒಡನಾಟ ಇಟ್ಟುಕೊಂಡಿದ್ದರು ಎನ್ನಲಾಗಿದೆ. ರವಿಶಂಕರ್ ಆಯೋಜಿಸಿದ ಪಾರ್ಟಿಗಳಲ್ಲೂ ದಿಗಂತ್ ಹಾಜರಾಗಿದ್ದರು ಎಂದು ತಿಳಿದುಬಂದಿದೆ.  ಐಂದ್ರಿತಾ ರೇ ಅವರು ಡ್ರಗ್ಸ್ ಜಾಲದ ಕಿಂಗ್‍ಪಿನ್ ಎಂದೇ ಗುರುತಿಸಲಾಗಿರುವ ಶೇಖ್ ಫಾಜಿಲ್ ಜೊತೆ ಛಾಯಾಚಿತ್ರ ತೆಗೆಸಿಕೊಂಡಿರುವುದಲ್ಲದೆ ಆತನ ಜೊತೆ ಹಲವಾರು ಕ್ಯಾಸಿನೋಗಳಿಗೂ ಹೋಗಿ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ದಿಗಂತ್ ಮತ್ತು ಐಂದ್ರಿತಾ ಇಬ್ಬರು ರಾಹುಲ್ ಆಯೋಜಿಸಿದ್ದ ಪಾರ್ಟಿಗಳಲ್ಲೂ ಭಾಗಿಯಾಗಿದ್ದರು. ಮಾತ್ರವಲ್ಲ ಆದಿತ್ಯ ಆಳ್ವ ತಮ್ಮ ಒಡೆತನದ ಹೌಸ್ ಆಫ್ ಲೈಫ್ ರೆಸಾರ್ಟ್ ಪಾರ್ಟಿಗಳಲ್ಲೂ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.  ಹೀಗಾಗಿ ನಿನ್ನೆ ಪೊಲೀಸರು ದಿಗಂತ್ ಮತ್ತು ಐಂದ್ರಿತಾ ಅವರಿಗೆ ನೋಟಿಸ್ ಜಾರಿ ಮಾಡಿ ನಾಳೆ ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.

ನೋಟಿಸ್ ಜಾರಿಯಾದ ಹಿನ್ನೆಲೆಯಲ್ಲಿ ಇಂದು ದಿಗಂತ್ ಮತ್ತು ಐಂದ್ರಿತಾ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆಗೊಳಗಾದರು.  ಡ್ರಗ್ಸ್ ಜಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜತೆ ದಿಗಂತ್ ಮತ್ತು ಐಂದ್ರಿತಾ ರೈ ಇರುವ ಪೋಟೋಗಳನ್ನು ತನಿಖಾಧಿಕಾರಿಗಳು ಅವರಿಗೆ ತೋರಿಸಿ ಇವರ ಪರಿಚಯ ಇದೆಯೇ ಎಂದು ಕೇಳಿದ್ದಾರೆ.

ಶೇಖ್ ಫಾಝಲ್, ರವಿಶಂಕರ್, ರಾಹುಲ್ ನಿಮಗೆ ಪರಿಚಯಸ್ಥರಾ, ಹೇಗೆ ಪರಿಚಯ, ಅವರು ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ನೀವು ಹೋಗುತ್ತಿದ್ರಾ, ಎಂದು ತನಿಖಾಧಿಕಾರಿಗಳು ಕೇಳಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಡ್ರಗ್ಸ್ ಜಾಲದಲ್ಲಿ ನಿಮ್ಮ ಹೆಸರುಗಳು ಕೇಳಿ ಬರುತ್ತಿದೆ. ಇದಕ್ಕೆ ನೀವು ಏನು ಹೇಳುತ್ತೀರಿ ಎಂದು ಪ್ರಶ್ನಿಸಿರುವ ತನಿಖಾಧಿಕಾರಿಗಳು ಆದಿತ್ಯ ಆಳ್ವಾ, ವಿರೇನ್ ಖನ್ನಾ ಮುಂತಾದವರು ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ನೀವು ಹೋಗುತ್ತಿದ್ರಾ, ಒಂದು ವೇಳೆ ಹೋಗುತ್ತಿದ್ದರೆ, ಅಲ್ಲಿಗೆ ಯಾರ್ಯಾರು ಬರುತ್ತಿದ್ದರು? ಡ್ರಗ್ಸ್ ಜಾಲದಲ್ಲಿ ಬಂಧಿಸಿರುವ ಆರೋಪಿಗಳ ಬಗ್ಗೆ ನಿಮಗೆ ಪರಿಚಯವಿದೆಯೇ ಎಂದು ಪ್ರಶ್ನಿಸಿದ್ದಾರೆ.

ತಡರಾತ್ರಿ ನಡೆಯುತ್ತಿದ್ದ ಪಾರ್ಟಿಗಳಿಗೆ ಹೋಗುತ್ತಿದ್ರಾ, ಹೋಗುತ್ತಿದ್ದರೆ, ಆ ಪಾರ್ಟಿಗಳು ಎಲ್ಲಿ ನಡೆಯುತ್ತಿದ್ದವು, ಡ್ರಗ್ಸ್ ಪೆಡ್ಲರ್‍ಗಳ ಪರಿಚಯವಿದೆಯೇ? ಇದ್ದರೆ ಹೇಗೆ ಪರಿಚಯವಾದರೂ ಎಂಬ ವಿವರಗಳ ಬಗ್ಗೆ ಅವರಿಂದ ಉತ್ತರ ಪಡೆದಿದ್ದಾರೆ. ಶೇಖ್ ಫಾಝಲ್ ಎಷ್ಟು ವರ್ಷದಿಂದ ನಿಮಗೆ ಪರಿಚಯ ಎಂಬಿತ್ಯಾದಿ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಇಬ್ಬರಿಗೂ ಕೇಳಿ ಕೆಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

Facebook Comments