ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ಕೊರೋನಾಗೆ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿರುವ ನಿರ್ಮಾಪಕ, ಕನಸಿನ ರಾಣಿ ಎಂದು ಹೆಸರಾಗಿರುವ ನಟಿ ಮಾಲಾಶ್ರೀ ಅವರ ಪತಿ ರಾಮು ಅವರು ಕೋವಿಡ್​-19 ಸೋಂಕಿನಿಂದಾಗಿ ಮೃತ ಪಟ್ಟಿದ್ದಾರೆ. ಒಂದು ವಾರದ ಹಿಂದೆ ಅವರಲ್ಲಿ ಸೋಂಕು ದೃಢಪಟ್ಟಿದ್ದು, ಉಸಿರಾಟದ ಸಮಸ್ಯೆಗೂ ಒಳಗಾಗಿದ್ದರು. ಎಂ.ಎಸ್​. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಅಸುನೀಗಿದ್ದಾರೆ.

ವಾರದ ಹಿಂದೆ ನಿರ್ಮಾಪಕ ರಾಮುಗೆ ಕೋವಿಡ್ ಪಾಸಿಟಿವ್ ಧೃಡವಾದ ಹಿನ್ನೆಲೆ ಅವರನ್ನು ಎಮ್ .ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಮು ಅವರು ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

‘ರಾಜಕೀಯ’ ಸಿನಿಮಾ ಮೂಲಕ ನಿರ್ಮಾಪಕರಾದ ಅವರು ಬಳಿಕ ಗೋಲಿಬಾರ್, ಲಾಕಪ್​ ಡೆತ್ ಚಿತ್ರಗಳ ಮೂಲಕ ಯಶಸ್ಸು ಹಾಗೂ ಜನಪ್ರಿಯತೆ ಗಳಿಸಿದರು. ಕಲಾಸಿಪಾಳ್ಯ, ಸಿಬಿಐ ದುರ್ಗಾ, ಎಕೆ-47, ಹಾಲಿವುಡ್, ಮುತ್ತಿನಂಥ ಹೆಂಡ್ತಿ, ಹಲೋ ಸಿಸ್ಟರ್ ಮುಂತಾದ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು. ಪ್ರಜ್ವಲ್​ ದೇವರಾಜ್​ ಅಭಿನಯದ ‘ಅರ್ಜುನ್​ ಗೌಡ’ ಚಿತ್ರಕ್ಕೆ ಅವರು ಬಂಡವಾಳ ಹೂಡಿದ್ದು, ಅದು ನಿರ್ಮಾಣ ಹಂತದಲ್ಲಿ ಇರುವಾಗಲೇ ಅವರು ಇನ್ನಿಲ್ಲವಾಗಿದ್ದಾರೆ.

ಕೋಟಿ ರಾಮು ಎಂದೇ ಖ್ಯಾತರಾದ ನಿರ್ಮಾಪಕ ರಾಮು ಅವರು ಕನ್ನಡದ ಹೆಮ್ಮೆಯ ನಿರ್ಮಾಪಕರಲ್ಲಿ ಒಬ್ಬರು. ಕುಣಿಗಲ್ ಮೂಲದ ರಾಮು, ಅದ್ಧೂರಿ ವೆಚ್ಚದಲ್ಲಿ ಸಾಹಸಮಯ ಸಿನಿಮಾ ನಿರ್ಮಾಣಕ್ಕೆ ಹೆಸರಾಗಿದ್ದಾರೆ.

ಅವರು ನಿರ್ಮಾಣದ ಅರ್ಜುನ್ ರೆಡ್ಡಿ ಬಿಡುಗಡೆ ಆಗಬೇಕಿದೆ. ರಾಮು ಅವರು ನಿಧನಕ್ಕೆ ದೇವರಾಜ್, ಶಿವರಾಜ್ ಕುಮಾರ್, ದರ್ಶನ್ ಸೇರಿದಂತೆ ಹಲವು ಕಲಾವಿದರು, ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin