ರಸ್ತೆ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಗಾಯಕ, ಬಿಬಿಎಂಪಿ ವಿರುದ್ಧ ಅಸಮಾಧಾನ
ಬೆಂಗಳೂರು,ಮೇ 11- ಎಂತಹ ದಕ್ಷ ಅಧಿಕಾರಿ ಬಿಬಿಎಂಪಿ ಮುಖ್ಯಸ್ಥರಾಗಿ ಬಂದರೂ ಇಲ್ಲಿನ ಸಮಸ್ಯೆಗಳಿಗೆ ಮುಕ್ತಿ ಕೊಡಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಬಂದಿರುವ ತುಷಾರ್ ಗಿರಿನಾಥ್ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೂ ಅಧಿಕಾರಿಗಳನ್ನು ಬೆಂಡೆತ್ತುತ್ತಿದ್ದಾರೆ ಮಾತ್ರವಲ್ಲ ನಗರದ ಮೂಲಭೂತ ಸಮಸ್ಯೆ ಪರಿಹಾರಕ್ಕೆ ಹಗಲಿರುಳು ಶ್ರಮಿಸುವಂತೆ ಕರೆ ನೀಡುತ್ತಿದ್ದಾರೆ.
ಆದರಲ್ಲೂ ಪ್ರಮುಖವಾಗಿ ಮಳೆ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಿ ಎಂದು ಸೂಚಿಸುತ್ತಿದ್ದಾರೆ. ದಪ್ಪ ಚರ್ಮದ ಅಧಿಕಾರಿಗಳಿಗೆ ಮಾತ್ರ ಆಯುಕ್ತರ ಈ ಮಾತು ಕಿವಿ ಮೇಲೆ ಬೀಳುತ್ತಿಲ್ಲ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ. ಕೆಲ ದಿನಗಳ ಹಿಂದೆ ಕಿರುತೆರೆ ನಟಿಯೊಬ್ಬರು ರಸ್ತೆಗುಂಡಿಗೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರೂ. ಇದೀಗ ಮತ್ತೊಬ್ಬ ಗಾಯಕ ರಸ್ತೆ ಗುಂಡಿಗೆ ಬಿದ್ದು ತಮ್ಮ ಕಾಲು ಮುರಿದುಕೊಂಡಿದ್ದಾರೆ.
ಖ್ಯಾತ ಗಾಯಕರಾಗಿರುವ ಅಜಯ್ ವಾರಿಯರ್ ಅವರೇ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ರಸ್ತೆಗುಂಡಿಯಿಂದ ಕಾಲು ಮುರಿದುಕೊಂಡಿರುವ ಛಾಯಾಚಿತ್ರ ಅಪ್ಲೋಡ್ ಮಾಡಿ ಬಿಬಿಎಂಪಿಯವರ ಬೇಜವಾಬ್ದಾರಿತನದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ರೈಲು ಮೂಲಕ ಕೇರಳಕ್ಕೆ ಪ್ರಯಾಣಿಸಬೇಕಿದ್ದ ಅಜಯ್ ಅವರು ರೈಲ್ವೆ ನಿಲ್ದಾಣ ತಲುಪಲು ಓಲಾ, ಊಬರ್ ಸಿಗದೆ ನಿಲ್ದಾಣಕ್ಕೆ ರಸ್ತೆ ಮಾರ್ಗವಾಗಿ ನಡೆದುಕೊಂಡು ಹೋಗುತ್ತಿದ್ದರು.ಆ ಸಂದರ್ಭದಲ್ಲಿ ಪಾದಚಾರಿ ಮಾರ್ಗದಲ್ಲಿ ಮಳೆ ನೀರಿನಿಂದ ತುಂಬಿ ಹೋಗಿದ್ದ ಗುಂಡಿಗೆ ಕಾಲಿಟ್ಟು ಕಾಲು ಮುರಿದುಕೊಂಡಿದ್ದಾರೆ.
ಅದೃಷ್ಟವಶಾತ್ ನನ್ನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ಆದರೆ, ನಮ್ಮ ಜೀವನ ಕೂಡ ಅಮೂಲ್ಯ ಹೀಗಾಗಿ ಜನರಿಂದ ತೆರಿಗೆ ಹಣ ಕಟ್ಟಿಸಿಕೊಳ್ಳುವ ಬಿಬಿಎಂಪಿಯವರು ಸಾರ್ವಜನಿಕರಿಗೆ ಸೂಕ್ತ ರಸ್ತೆಗಳನ್ನು ನಿರ್ಮಿಸುವುದು ಅವರ ಹೊಣೆ ಎಂದು ಅವರು ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಪಾದಚಾರಿ ಮಾರ್ಗದಲ್ಲಿರುವ ಗುಂಡಿಗೆ ಕಾಲಿಟ್ಟು ಕಾಲು ಮುರಿದುಕೊಂಡಿರುವ ಅಜಯ್ ವಾರಿಯರ್ ಪರ ಹಲವಾರು ನಾಗರಿಕರು ಬ್ಯಾಟಿಂಗ್ ಮಾಡಿದ್ದಾರೆ. ಈ ಕೂಡಲೇ ಬಿಬಿಎಂಪಿ ಮುಖ್ಯ ಆಯುಕ್ತರು ವಾರಿಯರ್ ಅವರ ಮನೆಗೆ ತೆರಳಿ ವಾಸ್ತವಾಂಶ ತಿಳಿದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನೂರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.