ಕೊರೋನಾ ಕಷ್ಟ ಕಾಲದಲ್ಲಿ ಕಲಾವಿದರ ಸ್ಪಂದನೆ ಹೇಗಿತ್ತು..?

ಈ ಸುದ್ದಿಯನ್ನು ಶೇರ್ ಮಾಡಿ

ಕನ್ನಡ ಚಿತ್ರರಂಗವನ್ನು ಕವಿದುಕೊಂಡಿದ್ದ ಕೋವಿಡ್ ಎಂಬ ಕಗ್ಗತ್ತಲ ಕಾರ್ಮೋಡ ಮೆಲ್ಲ ಮೆಲ್ಲನೆ ಮರೆಯಾಗುತ್ತಿದೆ. ಭರವಸೆ ಎಂಬ ಆಶಾಕಿರಣ ಇಣುಕತೊಡಗಿದೆ. ಅರ್ಧಕ್ಕೆ ನಿಂತಿರುವ ಚಿತ್ರಗಳ ಚಿತ್ರೀಕರಣವನ್ನು ಮುಂದುವರಿಸಬಹುದು ಎಂದು ಸರ್ಕಾರ ಅನುಮತಿ ಕೊಟ್ಟ ತಿಂಗಳ ತರುವಾಯ ಸ್ಟಾರ್ ಕಲಾವಿದರು ಒಬ್ಬೊಬ್ಬರಾಗಿ ಸೆಟ್‍ಗೆ ಹಾಜರಾಗತೊಡಗಿದ್ದಾರೆ.

ಸುದೀಪ್ ಅಭಿನಯದ ಫ್ಯಾಂಟಮ್ ಎಂಬ ಚಿತ್ರದ ಕೆಲಸವು ಹೈದರಾಬಾದ್‍ನಲ್ಲಿ ನಡೆಯು ತ್ತಿದೆ. ಆರ್.ಚಂದ್ರು ನಿರ್ದೇಶಿಸಿ ಉಪೇಂದ್ರ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಕಬ್ಜ ಎಂಬ ಬಹುಭಾಷಾ ಚಿತ್ರ ಹಾಗೂ ಶ್ರೀ ಮುರುಳಿಯ ಮದಗಜ ಎಂಬ ಚಿತ್ರಕ್ಕೆ ಬೆಂಗಳೂರಿನ ಹಳೇ ಮಿನರ್ವ ಮಿಲ್ ಆವರಣದಲ್ಲಿ ಚಿತ್ರೀಕರಣ ನಡೆದಿದೆ.

ಯಶ್ ಅವರ ಕೆಜಿಎಫ್-2 ಎಂಬ ಫ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಈ ಹಂತದಲ್ಲಿ ಪೂರ್ಣಗೊಳ್ಳಲಿದೆ. ಚಿತ್ರ ಪ್ರದರ್ಶನಕ್ಕೆ ಅನುಮತಿ ದೊರೆತು ಚಿತ್ರಮಂದಿರಗಳು ತೆರೆದುಕೊಂಡಾಗ ಸಿನಿಮಾ ವಹಿವಾಟು ಸಹಜ ಸ್ಥಿತಿಗೆ ಮರಳಲು ಸಾಧ್ಯ.

ಚಿತ್ರೀಕರಣ ನಡೆಯುವ ದಿನಗಳಲ್ಲಿ ನಟ-ನಟಿಯರು, ತಂತ್ರಜ್ಞರು ಸದಾ ಬ್ಯುಸಿ ಯಾಗಿರುತ್ತಿದ್ದರು. ಕೊರೊನಾ ಸಂಬಂಧ ಲಾಕ್‍ಡೌನ್ ಹೇರಿದ ನಂತರ ಎಲ್ಲ ಸಬ್ಧ. ಬಿಡುವಿನ ಸಮಯವನ್ನು ತಾರೆಯರು ಹೇಗೆ ಕಳೆದರು ಎಂಬ ಕುತೂಹಲ ಬಹಳ ಜನರಿಗೆ ಇದೆ. ಈ ಅವಯಲ್ಲಿ ಒಂದಷ್ಟು ಜನ ವಿವಶರಾದರು. ಈ ಸಾವಿಗೆಲ್ಲ ಕೊರೊನಾ ಕಾರಣವಲ್ಲ. ಬೇರೆ ಬೇರೆ ಕಾರಣಗಳಿವೆ.

ಇನ್ನು ಕೆಲ ನಟ-ನಟಿಯರು ಮದುವೆ ಮಾಡಿಕೊಂಡು ಗೃಹಸ್ಥರಾದರು. ಮೂರ್ನಾಲ್ಕು ನಟಿಯರು ಸ್ವಂತ ಆನ್‍ಲೈನ್ ಉದ್ಯಮ ಪ್ರಾರಂಭಿಸಿದರು. ಹಲವು ಸೆಲಬ್ರಿಟಿಗಳು ವರ್ಕ್‍ಔಟ್‍ನಲ್ಲಿ ತೊಡಗಿದರು. ಈ ಎಲ್ಲಾ ಚಟುವಟಿಕೆಗಳು ಈಗಾಗಲೇ ವೈರಲ್ ಆಗಿವೆ.

ಯಾವುದೇ ಸಂಕಷ್ಟ ಬಂದರೂ ಕೂಡ ಕಲಾವಿದರು ಸ್ವಯಂ ಪ್ರೇರಣೆಯಿಂದ ನೆರವು ನೀಡಬೇಕು ಎಂದು ಹಲವರ ಅಭಿಪ್ರಾಯ.
ಜನರು ಹಣಕೊಟ್ಟು ಟಿಕೆಟ್ ಖರೀದಿಸಿ ಸಿನಿಮಾ ನೋಡಿದರೆ ತಾನೇ ಕಲಾವಿದರ ಕಿಸೆ ತುಂಬಲು ಸಾಧ್ಯ ಎಂಬುದು ಅವರ ತರ್ಕ.

ರಾಜ್ಯದ ಬಹುತೇಕ ಜನರು ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದಾಗ ಕಲಾವಿದರು ಅವರ ನೆರವಿಗೇಕೆ ಬರಲಿಲ್ಲ ಎಂದು ಕೇಳುವವರಿದ್ದಾರೆ. ಆದರೆ, ಕಲಾವಿದರಿಗೆ ಕುಳಿತ ಕಡೆ ಹಣ ಬಂದು ಬೀಳುವುದಿಲ್ಲ. ಬೆವರು ಸುರಿಸಿ ಸಂಪಾದಿಸ ಬೇಕಾಗುತ್ತದೆ ಎಂಬ ಅರಿವೂ ಕೆಲವರಿಗಿದೆ.

ಈ ಸಂಕಷ್ಟದ ದಿನಗಳಲ್ಲಿ ಹಲವು ಕಲಾವಿದರು ತಮ್ಮ ಶಕ್ತ್ಯಾನುಸಾರ ಸಹಾಯ ಹಸ್ತ ಚಾಚಿದ್ದಾರೆ. ಆದರೆ, ನಾನು ನೆರವು ನೀಡಿದ್ದೇನೆ. ಎಂದು ಹೇಳಿಕೊಳ್ಳುವುದು ವಿರಳ. ಕೋವಿಡ್ ಸಂಕಷ್ಟ ಪ್ರಾರಂಭವಾದ ಹೊಸದರಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಪುನೀತ್‍ರಾಜ್‍ಕುಮಾರ್ ಅವರು 50 ಲಕ್ಷ ನೀಡಿದರು.

ತೀವ್ರ ಸಂಕಷ್ಟದಲ್ಲಿದ್ದ ಕೆಲವು ಕುಟುಂಬಗಳಿಗೂ ಹಣ ಕಳುಹಿಸಿಕೊಟ್ಟರು. ಗಾಯಕ ವಿಜಯಪ್ರಸಾದ್ 10 ಲಕ್ಷ, ಪದ್ಮಭೂಷಣ ಬಿ.ಸರೋಜಾದೇವಿಯವರು 5 ಲಕ್ಷ, ನಟಿ ದೀಪಿಕಾದಾಸ್ 5 ಲಕ್ಷ ದೇಣಿಗೆ ಕೊಟ್ಟರು.

ನಿಖಿಲ್ ಕುಮಾರಸ್ವಾಮಿಯವರು ಕನ್ನಡ ಚಿತ್ರರಂಗದ ಎಲ್ಲಾ ಸಂಘಗಳಿಗೂ ಪ್ರತ್ಯೇಕವಾಗಿ ಗಣನೀಯ ಮೊತ್ತದ ದೇಣಿಗೆ ಕೊಟ್ಟರು. ಟಿವಿ ಕ್ಷೇತ್ರದವರಿಗೂ ನೆರವಾದರು. ದರ್ಶನ್, ಶಿವರಾಜ್‍ಕುಮಾರ್, ಯಶ್ ಮುಂತಾದವರು ಕೂಡಾ ಪ್ರಚಾರದ ಪ್ರಖರತೆಗೆ ಸಿಲುಕದೆ ಹಲವರಿಗೆ ನೆರವಾಗಿದ್ದಾರೆ.

ಸುದೀಪ್ ಅವರದೂ ಪ್ರಚಾರ ರಹಿತ ಸೇವೆ. ತಮ್ಮ ಟ್ರಸ್ಟ್ ಮೂಲಕ ಅವರು ಹಲವರಿಗೆ ದಿನಸಿ ವಿತರಿಸಿದರು. ಇದಲ್ಲದೆ ಅವರು ಚಿತ್ರದುರ್ಗ ಜಿಲ್ಲೆಯ ನಾಲ್ಕು ಹಾಗೂ ಶಿವಮೊಗ್ಗ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಕೆಲಸಕ್ಕೆ ಮುಂದಾಗಿದ್ದಾರೆ. ಅವರ ಈ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸಚಿವರು ಕೂಡ ಸುದೀಪ್ ಅವರನ್ನು ಅಭಿನಂದಿಸಿದ್ದಾರೆ.

ನಟಿ ಪ್ರಣೀತಾ ಸುಭಾಷ್ ಅವರು ತಮ್ಮ ಸ್ವಂತ ಹಣದ ಜತೆಗೆ ತಮ್ಮ ಪರಿಚಿತರಿಂದ ಹಣ ಸಂಗ್ರಹಿಸಿ 500 ಕುಟುಂಬಗಳಿಗೆ ತಲಾ 2000ರೂ. ವಿತರಿಸಿದರು. ಸಿನಿಮಾ ಕಾರ್ಮಿಕರ ನಿಗೂ ಒಂದು ಲಕ್ಷ ಕೊಟ್ಟರು. ಇದಲ್ಲದೆ ಪ್ರಣೀತಾ ಅವರು ನೂರಕ್ಕೂ ಹೆಚ್ಚು ಆಟೋಗಳಿಗೆ ಸುರಕ್ಷಿತ ಫೈಬರ್ ಶೀಟ್ ಹಾಕಿಸಿದ್ದಾರೆ. ಪ್ರಣೀತಾ ಅವರ ತಾಯಿ ಮತ್ತು ತಂದೆ ಇಬ್ಬರೂ ವೈದ್ಯರು. ಅವರು ಹಲವು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಇವರೆಲ್ಲರಿಗಿಂತ ಮೊದಲು ಕಾರ್ಯಾಚರಣೆಗೆ ಇಳಿದವರು ಲೂಸಿಯಾ ಪವನ್ ಕುಮಾರ್. ಸಿನಿಮಾ ಕಾರ್ಮಿಕರ ಸ್ಥಿತಿಯನ್ನು ಹತ್ತಿರದಿಂದ ಕಂಡಿರುವ ಅವರು ನಾಲ್ಕೇ ದಿನಗಳಲ್ಲಿ 433 ಜನರಿಂದ 458776 ರೂ.ಸಂಗ್ರಹಿಸಿ ಅದನ್ನು ಅಗತ್ಯವಿದ್ದವರಿಗೆ ವಿತರಿಸಿದರು.

ಟಿವಿ ಸೀರಿಯಲ್ ಹಾಗೂ ಸಿನಿಮಾ ನಿರ್ಮಾಪಕಿ ಶೃತಿನಾಯ್ಡು, ಆನಂದ್ ಆಡಿಯೋ ಸಂಸ್ಥೆಯ ಶ್ಯಾಂ ಮತ್ತು ಆನಂದ್, ಉಪೇಂದ್ರ, ಬಿಗ್‍ಬಾಸ್ ಖ್ಯಾತಿಯ ಪ್ರಥಮ್, ನಿರ್ಮಾಪಕರಾದ ಮುನಿರತ್ನ, ರಮೇಶ್‍ರೆಡ್ಡಿ ಹೀಗೆ ಹಲವರು ಸಂತ್ರಸ್ತರಿಗೆ ನೆರವಾದರು.

ನಟಿ ಅಮೂಲ್ಯ ಅವರು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿದ್ದ 50 ಮಂದಿ ಗರ್ಭಿಣಿಯರಿಗೆ ಸೀಮಂತ ಮಾಡಿದರಲ್ಲದೆ, ದಾದಿಯರಿಗೆ ಗೌರವ ಸಮರ್ಪಿಸಿದರು. ಅವರ ಪತಿ ಜಗದೀಶ್ ಅವರು ದಿನಸಿ ವಿತರಿಸಿದರು.
ನಟಿ ರಾಗಿಣಿ ದ್ವಿವೇದಿಯಂತೂ ತಿಂಗಳುಗಟ್ಟಲೆ ಬ್ಯುಸಿಯಾಗಿದ್ದರು.

ಆರ್‍ಡಿವೆಲ್‍ಫೇರ್ ಎಂಬ ತಮ್ಮ ಸಂಸ್ಥೆಯ ಮೂಲಕ ಹಲವರ ಸಹಾಯ ಪಡೆದು ನಾನಾ ಆಸ್ಪತ್ರೆಗಳಿಗೆ ತೆರಳಿ ರೋಗಿಗಳಿಗೆ ಊಟೋಪಚಾರ ಮಾಡಿದರು. ಇದಲ್ಲದೆ ಇತರೆ ಅನೇಕ ಶ್ರಮಿಕರಿಗೆ ದಿನಸಿ, ಮಾಸ್ಕ್ ವಿತರಿಸಿದರು.

ಮೊದಲೇ ಹೇಳಿದಂತೆ ಇವರ್ಯಾರೂ ಪ್ರಚಾರದ ದೃಷ್ಟಿಯಿಂದ ಈ ಕೆಲಸ ಮಾಡಲಿಲ್ಲ. ಇವಿಷ್ಟು ಹೆಸರುಗಳು ತಾವಾಗಿಯೇ ಬೆಳಕಿಗೆ ಬಂದಿವೆ. ಇನ್ನೂ ಹಲವರ ಹೆಸರು ಗೌಪ್ಯವಾಗಿಯೇ ಇವೆ.

ರಾಜ್ಯದ ಜನರಿಗೆ ಸಂಕಷ್ಟ ಎದುರಾದಾಗಲೆಲ್ಲಾ ಚಿತ್ರರಂಗದವರು ಕೈಲಾದ ಮಟ್ಟಿಗೆ ನೆರವಾದ ಹಲವು ಉದಾಹರಣೆಗಳಿವೆ. ಆದರೆ, ಕಲಾವಿದರೆಲ್ಲ ಒಂದು ಬಲವಾದ ಸಂಘಟನೆ ಮಾಡಿಕೊಂಡು ಸೇವಾ ಕಾರ್ಯಕ್ಕೆ ಮುಂದಾಗ ಬೇಕು. ಆಗ ಜನರಿಗೆ ಮತ್ತಷ್ಟು ಅನುಕೂಲ ಆಗುತ್ತದೆ ಎಂಬ ದನಿ ಈಗಲೂ ಕೇಳಿ ಬರುತ್ತಿದೆ.

Facebook Comments

Sri Raghav

Admin