‘ಸಂದೇಶ್ ದಿ ಪ್ರಿನ್ಸ್’ ಹೊಟೇಲ್ ಸಿಬ್ಬಂದಿಗೆ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.17- ನಗರದ ಸಂದೇಶ್ ದಿ ಪ್ರಿನ್ಸ್ ಹೊಟೇಲ್‍ನ ಐವರು ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನಜರ್‍ಬಾದ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಹೊಟೇಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಅವರು ಹಲ್ಲೆ ನಡೆಸಿದ್ದಾರೆಂಬ ಆರೋಪದ ಸಂಬಂಧ ನಿನ್ನೆ ದೇವರಾಜ ಉಪ ವಿಭಾಗದ ಎಸಿಪಿ ಶಶಿಧರ್ ನೇತೃತ್ವದಲ್ಲಿ ಪೊಲೀಸರು ಹೊಟೇಲ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೊಟೇಲ್ ಮಾಲೀಕರು ಹಾಗೂ ಸಿಬ್ಬಂದಿಗಳಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ.

ಅಲ್ಲದೆ, ಹೊಟೇಲ್‍ನಲ್ಲಿರುವ ಸಿಸಿಟಿವಿ ಫುಟೇಜ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ನಜರ್‍ಬಾದ್ ಠಾಣೆ ಪೊಲೀಸರು ಹೊಟೇಲ್‍ನ ಐವರು ಸಿಬ್ಬಂದಿಗೆ ನೋಟಿಸ್ ನೀಡಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ.

ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಗೃಹ ಸಚಿವರಿಗೆ ನೀಡಿರುವ ಮನವಿ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದೇವೆ. ಅವರು ನಿನ್ನೆ ಈ ಘಟನೆಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಆಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.

Facebook Comments