ಯತ್ನಾಳ್ ವಿರುದ್ಧ ಗುಡುಗಿದ ಸಂಗಮೇಶ್ ನಿರಾಣಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.16- ಪಂಚಮಸಾಲಿ ಕಾರ್ಯಕ್ರಮದಲ್ಲಿ ಸಮುದಾಯಕ್ಕೆ ಮೂರು ಸಚಿವರನ್ನು ನೀಡಬೇಕೆಂದು ಶ್ರೀ ವಚನಾನಂದ ಶ್ರೀಗಳು ಇಟ್ಟಿರುವ ಬೇಡಿಕೆಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಪಾತ್ರವಿಲ್ಲ ಎಂದು ಸಹೋದರ ಸಂಗಮೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸ್ಥಾನಮಾನ ನೀಡುವಂತೆ ಯಾವ ಅರ್ಥದಲ್ಲಿ ಕೇಳಿದ್ದಾರೋ ಗೊತ್ತಿಲ್ಲ. ಅದಕ್ಕೂ ನಮ್ಮ ಸಹೋದರನಿಗೂ ಸಂಬಂಧ ಕಲ್ಪಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಎಲ್ಲ ಚುನಾವಣೆಗಳಲ್ಲೂ ಪಂಚಮಸಾಲಿ ಮಠ ಬಿಜೆಪಿಯನ್ನು ದೊಡ್ಡಮಟ್ಟದಲ್ಲಿ ಬೆಂಬಲಿಸಿದೆ. ನಮ್ಮ ಸಹೋದರ ಮುರುಗೇಶ್ ನಿರಾಣಿಯವರು ಸಮುದಾಯದಲ್ಲಿ ಹಿರಿಯ ನಾಯಕರು. ಸಹಜವಾಗಿ ಶ್ರೀಗಳು ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಸಿಎಂಗೆ ಮನವಿ ಮಾಡಿರಬಹುದು ಎಂದು ಹೇಳಿದರು. ಇದೇ ವೇಳೆ ಮಾಜಿ ಸಚಿವ ಹಾಗೂ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೆಂಡಕಾರಿದ ಸಂಗಮೇಶ್ ನಿರಾಣಿ, ನಮ್ಮ ಮನೆ ಬೆಕ್ಕು, ನಾಯಿಯ ಕಾಲು ಹಿಡಿದಿದ್ದರು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಯತ್ನಾಳ್ ಒಬ್ಬ ಹರಕುಬಾಯಿ ಮನುಷ್ಯ. ಅಧಿಕಾರ ಇಲ್ಲದಿದ್ದಾಗ ನಮ್ಮ ಮನೆಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದಲ್ಲದೆ ನಮ್ಮ ಮನೆಯ ನಾಯಿ, ಬೆಕ್ಕಿನ ಕಾಲು ಹಿಡಿದಿದ್ದ. ಏಕವಚನದಲ್ಲಿ ಹಿಗ್ಗಾಮುಗ್ಗಾ ಟೀಕೆ ಮಾಡಿದ್ದಲ್ಲದೆ ಯತ್ನಾಳ್‍ಒಬ್ಬ ಭಸ್ಮಾಸುರ ಎನ್ನುವ ಪದ ಪ್ರಯೋಗ ಮಾಡಿದರು.

ಈ ಹಿಂದೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಶಿ, ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧವೂ ನಾಲಿಗೆ ಹರಿಬಿಟ್ಟಿದ್ದರು. ಇದೀಗ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಕ್ಕೆ ನಾನು ಬಹಿರಂಗವಾಗಿ ಮಾತನಾಡುತ್ತಿದ್ದೇನೆ. ನಮ್ಮ ತಂಟೆಗೆ ಬಂದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.  ಯತ್ನಾಳ್ ಎಲ್ಲ ಪಕ್ಷಗಳಲ್ಲೂ ತಿರುಗಾಡಿ ಬಂದಿದ್ದಾರೆ. ಬಿಜೆಪಿ ಮುಖಂಡರ ಬಗ್ಗೆ ನಾಲಿಗೆ ಹರಿಬಿಟ್ಟು, ದೇವೇಗೌಡರಿಗೆ ಜೀ ಹುಜುರ್ ಅಂತಿದ್ದರು.

ಈಗ ನಮ್ಮ ಕುಟುಂಬದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಅವರಿಗೆ ರಾಜಕೀಯ ನೈತಿಕತೆ, ಬದ್ಧತೆ ಯಾವುದು ಇಲ್ಲ ಎಂದು ಸಂಗಮೇಶ್ ನಿರಾಣಿ ಆಕ್ರೋಶ ವ್ಯಕ್ತಪಡಿಸಿದರು. ಯತ್ನಾಳರು, ವಿಜಯಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಹಿರಂಗ ಚರ್ಚೆ ಏರ್ಪಡಿಸಲಿ. ನಾನು ಸ್ವತಃ ಹೋಗುತ್ತೇನೆ. ಅವರು ಮುರಗೇಶ ನಿರಾಣಿ ಕುರಿತು ಮಾಡಿರುವ ಆರೋಪ ಸಾಬೀತು ಮಾಡಲಿ. ತಾವು ರಾಜಕೀಯ ಶುದ್ಧ ವ್ಯಕ್ತಿ ಎಂಬುದನ್ನು ತೋರಿಸಲಿ. ಅವರು ರಾಜಕೀಯದಲ್ಲಿ ಏನೇನು ಮಾಡಿದ್ದಾರೆ ಎಂದು ನಾನೂ ಹೇಳುತ್ತೇನೆ ಎಂದು ತಿರುಗೇಟು ನೀಡಿದರು.

Facebook Comments