ಸುಗ್ಗಿ ಹಬ್ಬ ಸಂಕ್ರಾತಿಗೆ ಬೆಂಗಳೂರಲ್ಲಿ ವ್ಯಾಪಾರ ಜೋರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13- ಸುಗ್ಗಿಹಬ್ಬ ಸಂಕ್ರಾತಿಗೆ ಭರ್ಜರಿ ಸಿದ್ದತೆಗಳು ಜೊರಾಗಿದ್ದು, ರಾಜಧಾನಿ ಸೆರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರ ಭರಾಟೆ ಕಳೆಗಟ್ಟಿದೆ. ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವುದ್ದು ಹಾಗೂ ಲಸಿಕೆ ಬಂದ ಹಿನ್ನಲೆಯಲ್ಲಿ ಈ ಭಾರಿ ಸಂಕ್ರಾತಿಯನ್ನು ಜನರು ಸಂತಸದಿಂದ ಆಚರಿಸಲು ಸಿದ್ದರಾಗಿದ್ದಾರೆ. ಮಾರುಕಟ್ಟೆಗಲ್ಲಿ ಎಳ್ಳು-ಬೆಲ್ಲ ಪೊಟ್ಟಣಗಳು, ಬಾಳೆಹಣ್ಣು, ಗೆಣಸು, ಕಡಲೆಕಾಯಿ, ಕಬ್ಬು, ಹೂ, ಅವರೆಕಾಯಿ ರಾಶಿ ರಾರಾಜಿಸುತ್ತಿವೆ. ಖರೀದಿ ಸಂಭ್ರಮವೂ ಜೋರಾಗಿಯೇ ಇದೆ.

ಕೊರೊನಾದಿಂದ ವ್ಯಾಪಾರವಿಲ್ಲದೆ ಕಂಗೆಟ್ಟಿದ್ದ ವ್ಯಾಪಾರಿಗಳು ಹಬ್ಬದ ನೆಪದಲ್ಲಿ ಬೆಲೆಗಳನ್ನು ಸ್ವಲ್ಪಮಟ್ಟಿಗೆ ಏರಿಸಿದ್ದಾರೆ. ಇದರ ನಡೆವೆಯೂ ಜನರು ಹಬ್ಬ ಆಚರಣೆಗಾಗಿ ತಮ್ಮ ಶಕ್ತಿಗೆ ಅನುಗುಣವಾಗಿ ಖರೀದಿಯಲ್ಲಿ ತೊಡಗಿದ್ದಾರೆ. .ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೆಶ್ವರಂ, ಯಲಹಂಕ, ಹೆಬ್ಬಾಳ ಸೇರಿದಂತೆ ನಗರದ ಪ್ರಮುಖ ರಸ್ತೆ ಹಾಗೂ ವಿವಿಧ ಬಡಾವಣೆಗಳಲ್ಲಿ ಹಬ್ಬದ ಸಾಮಾಗ್ರಿಗಳು ರಾಶಿ ರಾಶಿ ಇದ್ದದ್ದು ಕಂಡು ಬಂತು.

ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆ, ತಾಲೂಕುಗಳಲ್ಲೂ ಸಹ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ.ಈ ಭಾರಿ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಫಸಲು ಸಹ ಚೆನ್ನಾಗಿಯೇ ಬಂದಿರುವ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪದಾರ್ಥಗಳು ಬಂದಿದ್ದು, ಸಗಟು ದರ ಕಡಿಮೆ ಇದ್ದರೂ ಚಿಲ್ಲರೆ ವ್ಯಾಪಾರ ಬೆಲೆ ಜೋರಾಗಿದೆ.

ಹಸಿ ಕಡ್ಲೇಕಾಯಿ ಕೆಜಿಗೆ 100 ರಿಂದ 120 ರೂ. ಇದ್ದರೆ, ಕೆಂಪುಗೆಣಸು ಕೆಜಿಗೆ 30 ರಿಂದ 40ರೂ., ಅವರೆಕಾಯಿ ಕೆಜಿಗೆ 40 ರಿಂದ 50 ರೂ., 100ರೂಗೆ ಜೂಡಿ ಕಬ್ಬು, ಬೆಳ್ಳು-ಬೆಲ್ಲ ಮಿಶ್ರಿತ ಪೊಟ್ಟಣ ಕೆಜಿಗೆ 200ರೂ ಇದೆ. ಇನ್ನು ಹೂವಿನ ದರದಲ್ಲಿ ಕನಾಂಕಬರ ಅಂಬರಕ್ಕೇರಿದ್ದು, ಕೆಜಿಗೆ 800ರಿಂದ 1000ರೂ. ಇದೆ. ಸೇವಂತಿಗೆ ಕೆಜಿಗೆ 150ರಿಂದ 200ರೂ., ಬಟನ್ ರೋಜ್ ಕೆಜಿಗೆ 100ರಿಂದ 150ರೂ., ಗುಲಾಬಿ ಕೆಜಿಗೆ 170ರಿಂದ 200ರೂ. ಇದ್ದು ಹೂವಿನಲ್ಲಿ ತುಸು ಕಡಿಮೆ ದರವಿದೆ.

ಏಲಕ್ಕಿ ಬಾಳೆಹಣ್ಣು ಕೆಜಿಗೆ 70ರಿಂದ 80ರೂ., ಸೇಬು ಕೆಜಿಗೆ 100ರಿಂದ 150 ರೂ., ಮೋಸಂಬಿ 40ರಿಂದ 50, ದಾಳಿಂಬೆ 150ರಿಂದ 180ರೂ. ಇದೆ. ಅವರೇಕಾಯಿ ಸೀಜನ್ ಆಗಿರುವುದರಿಂದ ತರಕಾರಿ ಹಾಗೂ ಸೊಪ್ಪಿನ ಬೆಲೆಯಲ್ಲಿ ನಿಟ್ಟುಸಿರು ಬಿಡುವಂತಿದೆ. ಕ್ಯಾರೆಟ್ ಕೆಜಿಗೆ 25ರೂ., ಬೀನ್ಸ್ 30, ಹಸಿ ಬಟಾಣಿ 40, ಟೊಮ್ಯಾಟೊ 20ರೂ. ಇದ್ದರೆ ಇನ್ನು ಒಂದು ಕಟ್ಟು ಸೊಪ್ಪಿಗೆ 10ರಿಂದ 20ರೂ. ಬೆಲೆ ಇದೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದಲೂ ಕೆಲ ಹಬ್ಬಗಳನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ, ಈಗ ಕೊರೊನಾ ಸಂಕಷ್ಟ ದೂರವಾಗುತ್ತಿದೆ. ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲು ಜನರು ಮುಂದಾಗಿದ್ದಾರೆ.

ಗವಿಗಂಗಾಧರೇಶ್ವರ ಸ್ವಾಮಿಗೆ ಸೂರ್ಯಾಭಿಷೇಕ:
ನಗರದ ಬಸವನಗುಡಿಯ ಗವಿಗಂಗಾಧರೇಶ್ವರ ಸ್ವಾಮಿಗೆ ನಾಳೆ ಸೂರ್ಯ ರಶ್ಮಿ ಸ್ಪರ್ಶವಾಗಲಿದ್ದು, ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ.ಪ್ರತಿ ಮಕರ ಸಂಕ್ರಾಂತಿ ದಿನ ಸಂಜೆ 5.15ರಿಂದ 5.20ರ ಸಮಯದಲ್ಲಿ ಸೂರ್ಯನ ಕಿರಣಗಳು ಗವಿಗಂಗಾಧರೇಶ್ವರ ಸ್ವಾಮಿಯ ಮೇಲೆ ಗೋಚರವಾಗಲಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಭಾರೀ ಪ್ರಮಾಣದಲ್ಲಿ ಈ ದೇವಾಲಯಕ್ಕೆ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.ದೇವಾಲಯದ ಮುಂಭಾಗ ಅಳವಡಿಸಿರುವ ಬೃಹತ್ ಪರದೆಯ ಮೇಲೆ ಸೂರ್ಯ ರಶ್ಮಿ ಸ್ವಾಮಿಯ ಮೇಲೆ ಬೀಳುವ ದೃಶ್ಯವನ್ನು ವೀಕ್ಷಿಸಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ಸಂಕ್ರಾಂತಿಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Facebook Comments