ಬೆಲೆ ಏರಿಕೆ ನಡುವೆಯೂ ಬೆಂಗಳೂರಲ್ಲಿ ಜೋರಾಗಿದೆ ಸಂಕ್ರಾಂತಿ ಖರೀದಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.14- ಮಕರ ಸಂಕ್ರಾಂತಿ ಹಬ್ಬದ ಸಿದ್ಧತೆ ಜೋರಾಗಿ ನಡೆದಿದ್ದು, ನಗರದ ಬೀದಿ ಬೀದಿಗಳಲ್ಲಿ ಕಬ್ಬಿನ ಜಲ್ಲೆಗಳು ರಾರಾಜಿಸುತ್ತಿವೆ. ಕೆಆರ್ ಮಾರುಕಟ್ಟೆ, ರಾಜಾಜಿನಗರ, ಗಾಂಧಿ ಬಜಾರ್, ಯಶವಂತಪುರ, ಮಲ್ಲೇಶ್ವರಂ, ಮಡಿವಾಳ, ದಾಸರಹಳ್ಳಿ, ವಿಜಯನಗರ, ಕಮಲಾನಗರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ರಸ್ತೆಯ ಎರಡೂ ಬದಿ ಕಬ್ಬಿನ ಜಲ್ಲೆಗಳು, ಹೂವು-ಹಣ್ಣುಗಳ ಮಾರಾಟದ ಭರಾಟೆ ಜೋರಾಗಿ ನಡೆದಿದೆ.

ಬಹುತೇಕ ಅಂಗಡಿಗಳ ಮುಂದೆ ಪೆಂಡಾಲ್ ಹಾಕಿ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು ಮತ್ತು ಸಂಕ್ರಾಂತಿ ಎಳ್ಳು ತುಂಬಿಕೊಡಲು ಪುಟ್ಟ ಪುಟ್ಟ ಡಬ್ಬಿಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿದೆ.
ಎಂದಿನಂತೆ ಹಬ್ಬಗಳ ಸಂದರ್ಭದಲ್ಲಿ ಹೂವಿನ ಧಾರಣೆ ಹೆಚ್ಚಾಗಿದ್ದರೂ ನಾಗರಿಕರು ಹೂವು-ಹಣ್ಣು ಖರೀದಿಯಲ್ಲಿ ತೊಡಗಿದ್ದರು.

ಸಂಕ್ರಾಂತಿ ಹಬ್ಬದಲ್ಲಿ ಪ್ರಮುಖವಾಗಿ ಅವರೆಕಾಯಿ, ಗೆಣಸು, ಕಡಲೆಕಾಯಿ ಬೇಯಿಸಿ ಸೇವಿಸುವುದರಿಂದ ಇವುಗಳ ಮಾರಾಟ ಜೋರಾಗಿಯೇ ನಡೆದಿದೆ. ಅದರಲ್ಲೂ ಕಡಲೆಕಾಯಿ ಬೆಲೆ ಅತಿ ಹೆಚ್ಚಾಗಿದೆ. ನಿನ್ನೆ ಮೊನ್ನೆ ತನಕ ಸೇರಿಗೆ 40ರೂ. ಇದ್ದದ್ದು ಇಂದು 120ರೂ. ಆಗಿ ಗ್ರಾಹಕರಿಗೆ ಶಾಕ್ ನೀಡಿದೆ. ಹೂವಿನ ಬೆಲೆ: ಈಗ ಸೀಜನ್ ಅಲ್ಲದ ಕಾರಣ ಮಲ್ಲಿಗೆ ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದು, ಕೆಜಿಗೆ 2500 ರಿಂದ 300ರೂ. ಇದೆ. ಕನಕಾಂಬರ ಕೆಜಿಗೆ 600 ರಿಂದ 800ರೂ., ಸೇವಂತಿಗೆ 80 ರಿಂದ 160ರೂ., ಕಾಕಡ 400 ರಿಂದ 500ರೂ., ಸುಗಂಧರಾಜ 90 ರಿಂದ 120ರೂ.

ಮಲ್ಲೇಶ್ವರಂ, ಕೆಆರ್ ಮಾರುಕಟ್ಟೆ, ಗಾಂಧಿಬಜಾರ್ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಎಳ್ಳು-ಬೆಲ್ಲ, ಒಣಕೊಬ್ಬರಿ, ಕಡಲೆಬೀಜ, ಹುರಿಗಡಲೆ ಮಿಶ್ರಣದ ಪ್ಯಾಕೆಟ್‍ಗಳನ್ನು ಕೊಳ್ಳಲು ಮಹಿಳೆಯರು ದಾವಿಸಿದರು. ಕಬ್ಬಿನ ಜೊಲ್ಲೆಗಳ ರಾಶಿ ರಾಶಿ ಮಾರುಕಟ್ಟೆಗೆ ಪ್ರವೇಶಿಸಿದ್ದು, ವ್ಯಾಪಾರವೂ ಜೋರಾಗಿ ನಡೆಯುತ್ತಿರುವುದರಿಂದ ಎಲ್ಲೆಲ್ಲೂ ಜನಸಂದಣಿ ಗಿಜಿಗುಡುತ್ತಿತ್ತು.

Facebook Comments

Sri Raghav

Admin