ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ : ಸಂತೋಷ್
ಬೆಂಗಳೂರು, ನ.30- ನನಗೆ ಯಾವುದೇ ರೀತಿಯ ಒತ್ತಡವಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯೂ ನಾನಲ್ಲ. ಇದೊಂದು ಆಕಸ್ಮಿಕ ಹಾಗೂ ಅಚಾತುರ್ಯವಷ್ಟೇ. ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಲ್ಲಸಲ್ಲದ ಆರೋಪ ಮಾಡಬಾರದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ತಿರುಗೇಟು ನೀಡಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಸೂಕ್ಷ್ಮ ಮನಸ್ಸಿನವನಲ್ಲ. ನನ್ನಲ್ಲಿ ವಿಲ್ಪವರ್ ಇದೆ. ನಾನು ಸಂಬಂಧಿಕರ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಜೀರ್ಣವಾಗಿತ್ತು. ಆ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲಿಗೆ ನಿದ್ರೆ ಮಾತ್ರೆ ತೆಗೆದುಕೊಂಡಿದ್ದೆನು. ನನ್ನ ಪತ್ನಿ ನೋಡಿ ಗಾಬರಿಯಾಗಿ ಆಸ್ಪತ್ರೆಗೆ ಸೇರಿಸಿದ್ದರು ಎಂದು ಸ್ಪಷ್ಟಪಡಿಸಿದರು.
ಡಿಕೆ ಶಿವಕುಮಾರ್ ಅವರು ವಿನಾಃಕಾರಣ ಹೇಳಿಕೆ ನೀಡಿದ್ದಾರೆ. ಹಿಂದೆಯೂ ಸಹ ಇದೇ ರೀತಿ ಹೇಳಿಕೆ ನೀಡಿದರು. ಉಪಚುನಾವಣೆಯಲ್ಲಿನ ಸೋಲಿನ ಹತಾಶೆಯಿಂದ ಆ ರೀತಿಯ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಅವರಿಗೆ 1 ತಿಂಗಳ ಕಾಲ ರಜೆ ನೀಡಲಿ ಎಂದು ಲೇವಡಿ ಮಾಡಿದರು.
ರಾಜಕೀಯ ಒತ್ತಡ ಇದ್ದೇ ಇರುತ್ತದೆ. ನಾನು ಇವೆಲ್ಲವನ್ನು ನಿಭಾಯಿಸುವ ಶಕ್ತಿ ಹೊಂದಿದ್ದೇನೆ. ಯಡಿಯೂರಪ್ಪನವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಇದು ಗೊತ್ತಿಲ್ಲದಿದ್ದರೆ ಸಿದ್ದರಾಮಯ್ಯ ಸಾಹೇಬರನ್ನು ನೋಡಿ ಕಲಿತುಕೊಳ್ಳಲಿ ಎಂದು ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.