‘ಕರಾಳ ದಿನ’ ದಿನಾಚರಣೆ : ‘ಹಿಂದಿ ದಿವಸ್’ ವಿರೋಧಿಸಿ ರಾಜ್ಯದಾದ್ಯಂತ ಭಾರಿ ಆಕ್ರೋಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.14- ಬಲವಂತ ವಾಗಿ ಹಿಂದಿ ಹೇರಿಕೆ ಮಾಡುವ ಮೂಲಕ ಕನ್ನಡಕ್ಕೆ ಅಪಾಯ ಬಂದೊದಗಿದೆ ಎಂದು ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆ ವಿರುದ್ಧ ಕನ್ನಡಪರ ಸಂಘಟನೆಗಳು ಕೈಗೊಂಡ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದಿ ಹುಟ್ಟುವ ಮೊದಲೇ ಕನ್ನಡ ಭಾಷೆ ಉದಯವಾಗಿತ್ತು.

ಇಂತಹ ಭಾಷೆ ನಶಿಸುವ ಕೆಲಸವನ್ನು ಹಿಂದಿಯವರು ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹಿಂದಿಯವರು ಕನ್ನಡಿಗರ ಮೇಲೆ ಮಾಡುತ್ತಿರುವ ಭಾಷಾ ದಬ್ಬಾಳಿಕೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು. ಹಿಂದಿ ದಿವಸ್ ಆಚರಣೆ ಮೂಲಕ ಕನ್ನಡವನ್ನು ಹಂತ ಹಂತವಾಗಿ ನಾಶ ಮಾಡುವ ಕೆಲಸ ನಡೆಯುತ್ತಿದೆ. ನಮ್ಮ ನಾಡಿನಲ್ಲಿ ಕನ್ನಡವೇ ಸಾರ್ವ ಭೌಮ. ಕನ್ನಡಿಗನೇ ಚಕ್ರಾಧಿಪತಿ. ಇಲ್ಲಿಗೆ ಯಾವ ಬಲವಂತದ ಭಾಷೆಯ ಅಗತ್ಯವಿಲ್ಲ. ಕಲಿಕೆಯ ಭಾಷೆಯಾದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಬ್ಯಾಂಕ್, ಅಂಚೆ ಕಚೇರಿ, ರೈಲ್ವೆ ಇಲಾಖೆಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕೆಂದು ನಾವು ಮೊದಲಿನಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಸಾವಿರಾರು ಉದ್ಯೋಗಗಳು ಕನ್ನಡಿಗರ ಕೈ ತಪ್ಪಿವೆ. ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಕನ್ನಡ ಭಾಷೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಿಂದಿ ದಿವಸ್ ಆಚರಣೆಯನ್ನು ರಾಜ್ಯದ ಎಲ್ಲರೂ ವಿರೋಧಿಸಬೇಕು.

ಒಕ್ಕೂಟ ವ್ಯವಸ್ಥೆಯಲ್ಲಿರುವ ಎಲ್ಲ ಭಾಷೆಗಳಿಗೂ ರಾಷ್ಟ್ರಭಾಷೆಯ ಪ್ರಾಧಾನ್ಯತೆ ಇದೆ. ನೆಲ, ಜಲ, ಭಾಷೆ, ಗಡಿಗಾಗಿ ಹೋರಾಟ ಮಾಡಿದ ಕನ್ನಡಪರ ಹೋರಾಟಗಾರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಭಾಷೆ, ಸಂಸ್ಕøತಿ ಉಳಿವಿಗಾಗಿ ನಾವು ಸಾಕಷ್ಟು ಹೋರಾಟಗಳನ್ನು ಮಾಡಿದ್ದೇವೆ. ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರಿಕೆ ಕ್ರಮವನ್ನು ಮುಂದುವರೆಸಿದರೆ ಮತ್ತೊಂದು ಹೋರಾಟಕ್ಕೆ ಹಿಂಜರಿ ಯುವುದಿಲ್ಲ ಎಂದು ಎಚ್ಚರಿಸಿದರು.

#ವಾಟಾಳ್ ನಾಗರಾಜ್ ಗುಡುಗು
ಬೆಂಗಳೂರು, ಸೆ.14- ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡಿಗನೇ ದೊರೆ. ಬಲವಂತದ ಹಿಂದಿ ಭಾಷೆಗೆ ಆಸ್ಪದ ನೀಡುವುದಿಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಗುಡುಗಿದರು. ಹಿಂದಿ ದಿವಸ್ ಆಚರಣೆ ವಿರುದ್ಧ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಕರಾಳ ದಿನ ಆಚರಣೆ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರಿಕೆ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್, ರೈಲ್ವೆ, ಅಂಚೆ ಕಚೇರಿ ಎಲ್ಲ ಕೇಂದ್ರ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿರಬೇಕು, ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಹಿಂದಿ ಹೇರಿಕೆ ಮೂಲಕ ಕನ್ನಡಿಗರಿಗೆ ವಂಚನೆ ಮಾಡಲಾಗುತ್ತಿದೆ. ಹಿಂದಿ ದಿವಸ್ ಆಚರಣೆ ಮೂಲಕ ಕನ್ನಡಕ್ಕೆ ಅತ್ಯಂತ ಅಪಾಯ ಬಂದೊದಗಿದೆ ಎಂದು ಹೇಳಿದರು.

ಕನ್ನಡ ಭಾಷೆ, ನೆಲ, ಜಲ, ಸಂಸ್ಕøತಿಗಾಗಿ ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಹಿಂದಿ ಹೇರಿಕೆ ಮೂಲಕ ಕನ್ನಡವನ್ನು ಕಡೆಗಣಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಅಪಾಯ ಬಂದೊದಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕನ್ನಡಿಗರು ರಾಜ್ಯದಲ್ಲಿ ಅಲ್ಪಸಂಖ್ಯಾತರಾಗುತ್ತಾರೆ ಎಂಬ ಆತಂಕ ವ್ಯಕ್ತಪಡಿಸಿದರು.ಕನ್ನಡ ಹೋರಾಟಗಾರರನ್ನು ಅಣಕಿಸುವ ಕೆಲಸ ನಡೆಯುತ್ತಿದೆ. ಶಾಸನ ಸಭೆಗಳಲ್ಲಿ ಕನ್ನಡದ ಪರ ದನಿ ಕ್ಷೀಣಿಸುತ್ತಿದೆ. ಹೀಗಾಗಿ ನಮ್ಮ ಭಾಷೆ, ಸಂಸ್ಕøತಿಗೆ ಧಕ್ಕೆಯಾಗುತ್ತಿದೆ ಎಂದು ವಾಟಾಳ್ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ ಸಂಘಟನೆಯವರು ಪ್ರತಿಭಟನೆ ನಡೆಸಿ ಕನ್ನಡಿಗರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.ಕರುನಾಡ ವಿಜಯಸೇನೆ ಸಂಘಟನೆ ಅಧ್ಯಕ್ಷ ದೀಪಕ್ ಮಾತನಾಡಿ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಹಿಂದಿ ಮೇಲಿನ ವ್ಯಾಮೋಹದಿಂದಾಗಿ ಎಲ್ಲ ರಾಜ್ಯಗಳ ಮೇಲೆ ಹಿಂದಿ ಹೇರುತ್ತಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಮೋಸ ಮತ್ತು ರಾಜ್ಯಗಳ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಾಗಿದೆ. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಈ ಕುರಿತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಿಗೆ ಪತ್ರ ಬರೆದಿರುವ ಅವರು ಮುಂದಿನ ದಿನಗಳಲ್ಲಿ ಶಾಂತಿ ಕದಡುವ ಹಂತಕ್ಕೂ ಹೋಗುತ್ತದೆ. ಹಿಂದಿ ದಿವಸ್ ಆಚರಣೆಗೆ ರಾಜ್ಯ ಸರ್ಕಾರ ಬೆಂಬಲ ನೀಡಬಾರದು. ಇದರ ವಿರುದ್ಧ ನಾವು ಪ್ರತಿ ಗ್ರಾಮಗಳಲ್ಲೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

# ಕೆರಳಿದ ಕನ್ನಡ ಪರ ಸಂಘಟನೆಗಳು
ಬೆಂಗಳೂರು, ಸೆ.14- ಹಿಂದಿ ದಿವಸ್ ಆಚರಣೆ ವಿರೋಧಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಚಳವಳಿ ವಾಟಾಳ್ ಪಕ್ಷ, ಜಯಕರ್ನಾಟಕ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಧೋರಣೆಯನ್ನು ಖಂಡಿಸಿದವು. ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಏಕಕಾಲದಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಬ್ಯಾಂಕ್‍ಗಳ ಮುಂದೆ ಪ್ರತಿಭಟನೆ ನಡೆಸಿ ಹಿಂದಿ ಹೇರಿಕೆಯನ್ನು ಖಂಡಿಸಿದರು.

ಬ್ಯಾಂಕ್‍ಗಳಲ್ಲಿ ಕನ್ನಡ ದೂರವಾದಷ್ಟು ಬ್ಯಾಂಕ್‍ಗಳ ಸೌಲಭ್ಯಗಳಿಂದ ಕನ್ನಡಿಗರು ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿವೆ ಎಂದು ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

ರೈಲ್ವೆ, ಅಂಚೆ ಇಲಾಖೆ ಸೇರಿದಂತೆ ಕೇಂದ್ರದ ಇಲಾಖೆಗಳಲ್ಲಿ ಉತ್ತರ ಭಾರತದವರನ್ನು ಭರ್ತಿ ಮಾಡಿ ಕನ್ನಡಿಗರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಉದ್ಯೋಗಗಳಲ್ಲಿ ನಡೆಯುವ ಪರೀಕ್ಷೆಯಲ್ಲಿ ಕನ್ನಡವನ್ನು ಕಡೆಗಣಿಸಿದ್ದು, ಮೆಟ್ರೋದಲ್ಲಿ ಬಲವಂತವಾಗಿ ಹಿಂದಿ ಹೇರಿಕೆ ಮಾಡಿದಾಗ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಮಾಡಿ ಕನ್ನಡವನ್ನು ರಾರಾಜಿಸುವಂತೆ ಮಾಡಿತು ಎಂದು ಅವರು ಹೇಳಿದರು.

ಕಳೆದ ಏಳು ವರ್ಷಗಳಲ್ಲಿ ಸುಮಾರು 21 ಸಾವಿರ ಬ್ಯಾಂಕಿಂಗ್ ಹುದ್ದೆಗಳ ಪೈಕಿ 19 ಸಾವಿರಕ್ಕೂ ಹೆಚ್ಚು ಹುದ್ದೆಗಳು ಹಿಂದಿ ಮತ್ತು ಇತರ ಭಾಷಿಗರ ಪಾಲಾಗಿವೆ. ಕನ್ನಡದ ಮಕ್ಕಳಿಗೆ ಕರ್ನಾಟಕದಲ್ಲೇ ಉದ್ಯೋಗವಿಲ್ಲದಂತಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಶಾಸಕರು ಮತ್ತು ಸಂಸದರಿಗೆ ಹಕ್ಕೊತ್ತಾಯದ ಪತ್ರಗಳನ್ನು ನೀಡಲಿದ್ದಾರೆ. ನಮ್ಮ ಧ್ವನಿ ಶಾಸನ ಸಭೆಗಳಲ್ಲಿ ಮೊಳಗಬೇಕು. ಹಿಂದಿಯನ್ನು ರಾಜ್ಯ ಭಾಷೆಯನ್ನಾಗಿ ಕಾಣುವ ಭಾರತ ಸಂವಿಧಾನದ 343ನೆ ಪರಿಚ್ಛೇದದಿಂದ 351ನೆ ಪರಿಚ್ಛೇದದವರೆಗೆ ತಿದ್ದುಪಡಿಯಾಗಬೇಕು. ಕನ್ನಡಕ್ಕೂ ಒಕ್ಕೂಟ ಸರ್ಕಾರದ ಆಡಳಿತ ಭಾಷೆಯ ಸ್ಥಾನಮಾನ ದೊರೆಯಬೇಕು ಎಂದು ಅವರು ಆಗ್ರಹಿಸಿದರು.

# ಹಿಂದಿ ಹೇರಿಕೆ ಸಹಿಸುವುದಿಲ್ಲ
ಬೆಂಗಳೂರು, ಸೆ.14- ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಯಾವುದೇ ಕಾರಣಕ್ಕೂ ಸಹಿಸು ವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ಹೇಳಿದ್ದಾರೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಹಿಂದಿ ನಾಮಫಲಕಗಳ ಮೇಲೆ ಮಸಿ ಬಳಿಯುವ ಮೂಲಕ ಪ್ರತಿಭಟನೆ ನಡೆಸಿದ ನಮ್ಮ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲು ಮಾಡಿದೆ. ಸರ್ಕಾರ ಕೂಡಲೇ ನಮ್ಮ ಹೋರಾಟಗಾರರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಹೇಳಿದರು.

ಕನ್ನಡಿಗರ ಪರ ದನಿ ಎತ್ತಿದ, ಕನ್ನಡ ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡಿದವರ ವಿರುದ್ಧ ಈ ರೀತಿ ಪ್ರಕರಣ ದಾಖಲಿಸಿ ನಮ್ಮ ನೈತಿಕ ಸ್ಥೈರ್ಯ ಕುಂದಿಸುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ. ಆದರೆ, ನಾವು ಇದಾವುದಕ್ಕೂ ಜಗ್ಗದೆ ನಾಡಪರ ಹೋರಾಟವನ್ನು ನಿರಂತರವಾಗಿ ಮಾಡುತ್ತ ಬಂದಿದ್ದೇವೆ. ಕೇಂದ್ರ ಸರ್ಕಾರ ಈಗ ಕರ್ನಾಟಕದ ಮೇಲೆ ಹಿಂದಿ ಹೇರಿಕೆ ಮಾಡಲು ಮುಂದಾಗಿದೆ. ಇದನ್ನು ಸಹಿಸಿಕೊಂಡು ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಮತ್ತೆ ಹೋರಾಟಕ್ಕಿಳಿಯುತ್ತೇವೆ ಎಂದು ಹೇಳಿದರು.

# ಜೆಡಿಎಸ್ ಪ್ರತಿಭಟನೆ :
ಬೆಂಗಳೂರು, ಸೆ.14-ಹಿಂದಿ ದಿವಸ್‍ಆಚರಣೆ ವಿರೋಧಿಸಿ ಜೆಡಿಎಸ್‍ನಿಂದ ಜೆಪಿ ಭವನದ ಬಳಿ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಟಿ.ಎ.ಶರವಣ ಹಿಂದಿ ದಿವಸ್ ಆಚರಣೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ – ಕಾಂಗ್ರೆಸ್ ಹಿಂದಿಗೋಸ್ಕರ ಕೆಲಸ ಮಾಡುವ ಪಕ್ಷಗಳು. ಕನ್ನಡಕ್ಕೋಸ್ಕರ ಇರುವ ಪಕ್ಷವೆಂದರೆ ಅದು ಜೆಡಿಎಸ್. ಹಿಂದಿ ಹೇರಿಕೆ ವಾಪಸ್ ಪಡೆಯ ಬೇಕು.

ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ನಾಡಿನ ನೆಲ, ಜಲದ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೋರಾಟ ಮಾಡುತ್ತಿದ್ದಾರೆ ಎಂದು ಶರವಣ ಹೇಳಿದರು.

 

 

Facebook Comments