“ಕೋರ್ಟ್ ಮೊರೆಹೋದ ಸಚಿವರುಗಳನ್ನು ವಜಾ ಮಾಡಿ”

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮಾ.6-ಮಾನಹಾನಿ ಸುದ್ದಿ ಪ್ರಸಾರವಾಗದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವ ಸಚಿವರುಗಳನ್ನು ಸಂಪುಟದಿಂದ ವಜಾ ಮಾಡಿ ಎಂದು ಶಾಸಕ ಸಾ.ರಾ.ಮಹೇಶ್ ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಗಾಂವೃತ್ತದ ಬಳಿ ನಡೆದ ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ, ಸಚಿವರು ಅರ್ಜಿ ಹಾಕಿರುವುದೇ ನಾವೆಲ್ಲರೂ ತಲೆ ತಗ್ಗಿಸುವ ವಿಚಾರ ಎಂದರು.

ಬಾಂಬೆಯಲ್ಲಿ ಅಷ್ಟು ಬಿಗಿ ಭದ್ರತೆ ಇಟ್ಟುಕೊಂಡಿದ್ದವರು ಈಗ ಏಕೆ ಅರ್ಜಿ ಹಾಕಿದ್ದಾರೆ. ಈ ಶಾಸಕರುಗಳನ್ನಿಟ್ಟುಕೊಂಡು ಬ್ಲಾಕ್‍ಮೇಲ್ ಮಾಡುವ ಷಡ್ಯಂತ್ರ ಮೊದಲೇ ನಿರ್ಧಾರವಾಗಿತ್ತಾ? ಸಚಿವರುಗಳನ್ನೇ ಬ್ಲಾಕ್‍ಮೇಲ್ ಮಾಡುತ್ತಾರೆ ಎಂದಾದರೆ ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಯವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸ್ನೇಹಿತರು ಬಾಂಬೆ ಟೂರ್ ಬಗ್ಗೆ ಹೇಳಿದಾಗ ನಾನು ಸುಳ್ಳು ಎಂದುಕೊಂಡಿದ್ದೆ. ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೆಯುತ್ತೇನೆ ಎಂದು ಒಬ್ಬರು ಹೇಳಿದ್ದರು. ಬಹುಶಃ ಅದರಲ್ಲಿ ಇವೆಲ್ಲ ಉಲ್ಲೇಖವಾಗಿರಬಹುದು ಎಂದು ಲೇವಡಿ ಮಾಡಿದರು.

ಜನಪರ ಸರ್ಕಾರ ತರಲು ಬಾಂಬೆಗೆ ಹೋಗಿದ್ದೆವು ಎಂದು ಬಾಂಬೆ ಟೀಂನವರು ಹೇಳುತ್ತಿದ್ದರು. ಅಲ್ಲಿ ಹೋಗಿ ಏನು ಮಾಡಿದರು ಎಂಬುದನ್ನು ಈಗ ವಿವರವಾಗಿ ಹೇಳಬೇಕಿದೆ. ಅವರು ಮಾಡಿರುವ ವಿಚಾರಗಳನ್ನು ಮಾತನಾಡಲು ಕೂಡ ಅಸಹ್ಯವಾಗುತ್ತದೆ. ವಿಡಿಯೋ ಪ್ರಸಾರಕ್ಕೆ ತಡೆ ಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿರುವ ಅಪಮಾನ ಎಂದು ಸಾ.ರಾ.ಮಹೇಶ್ ಕಿಡಿಕಾರಿದರು.

ಮೊನ್ನೆ ಒಬ್ಬರು ಅನೇಕ ಶಾಸಕರ ಸಿಡಿ ಇದೆ ಎಂದು ಒಬ್ಬರು ಹೇಳಿದ್ದರು. ಅದು ಸುಳ್ಳು ಎಂದಾಗಿದ್ದರೆ ತಕ್ಷಣ ಅವರನ್ನು ಏಕೆ ಬಂಸಲಿಲ್ಲ. ಕೆಲವರು ಮಾಡುವ ತಪ್ಪಿಗೆ ರಾಜಕಾರಣಿಗಳಾಗಿ ನಾವೆಲ್ಲ ತಲೆತಗ್ಗಿಸುವಂತಾಗಿದೆ. ಕುಟುಂಬದ ಸದಸ್ಯರು ಅನುಮಾನದಿಂದ ನೋಡುವಂತಾಗಿದೆ. ಮನೆಯಲ್ಲಿ ಮಕ್ಕಳ ಜತೆಯಲ್ಲಿ ಕುಳಿತು ಟಿವಿ ನೋಡಲು ಹಿಂಸೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಂಬೆಗೆ ಹೋದವರ ಬಗ್ಗೆ ಇನ್ನೂ ಏನೇನು ಇದೆಯೋ ಗೊತ್ತಿಲ್ಲ. ಅವರ ಘನಕಾರ್ಯಗಳೇನು ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ. ಈ ರೀತಿಯೆಲ್ಲಾ ಮಾಡಿ ಸರ್ಕಾರ ಮಾಡಬೇಕಿತ್ತೆ ಎಂದು ಪ್ರಶ್ನಿಸಿದರು.  ಇದಕ್ಕೂ ಮೊದಲು ನಡೆದ ಪ್ರತಿಭಟನೆಯಲ್ಲಿ ಶಾಸಕರಾದ ಅಶ್ವಿನ್‍ಕುಮಾರ್, ಮಾಜಿ ಮೇಯರ್ ಲಿಂಗಪ್ಪ, ನಗರ ಪಾಲಿಕೆ ಸದಸ್ಯರು ಭಾಗವಹಿಸಿದ್ದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

Facebook Comments

Sri Raghav

Admin