ಇಂದು ಸರಸ್ವತಿ ಪೂಜೆ ಮಾಡುವುದರಿಂದ ಏನು ಲಾಭ..? ಪೂಜಾ ವಿಧಾನ ಹೇಗೆ..?

ಈ ಸುದ್ದಿಯನ್ನು ಶೇರ್ ಮಾಡಿ

ಸರಸ್ವತಿ ನಮಸ್ತುಭ್ಯಂ ||
ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ
ಸಿದ್ಧಿರ್ಭವತು ಮೇ ಸದಾ||
ವಿದ್ಯೆಗೆ ಅಧಿದೇವತೆಯಾದ ಸರಸ್ವತಿಯನ್ನು ಹೀಗೆ ಸ್ತುತಿಸಲಾಗುತ್ತದೆ.  ಹಿಂದೂ ಧರ್ಮದ ಅನುಯಾಯಿಗಳು ಸರಸ್ವತಿಯನ್ನು ವಿದ್ಯಾದೇವತೆ ಎಂದು ಪರಿಗಣಿಸುತ್ತಾರೆ. ಇಲ್ಲಿ ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ, ವಿವೇಕ, ಪ್ರಜ್ಞಾ ಬುದ್ಧಿವಂತಿಕೆ, ಜ್ಞಾನ, ತಿಳುವಳಿಕೆ, ಸಂಸ್ಕøತಿ, ಕಲೆ ಎಲ್ಲವೂ ಒಳಗೊಂಡಿದೆ.

ಉತ್ತಮ ಮನುಷ್ಯರಾಗಲು ಹಣವಿಲ್ಲದಿದ್ದರೂ ಒಳ್ಳೆಯ ಅಗತ್ಯವಾಗಿರಬೇಕು. ವಿದ್ಯಾದೇವತೆಯನ್ನು ಆರಾಧಿಸುವ ಮೂಲಕ ವಿದ್ಯೆ ವಿವೇಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಒಂಭತ್ತು ದಿನಗಳಲ್ಲೂ ಒಂದೊಂದು ದೇವಿಯನ್ನು ಆರಾಧಿಸಲಾಗುತ್ತದೆ. ಅದರಲ್ಲಿ ಸರಸ್ವತಿ ಪೂಜೆ ಅತ್ಯಂತ ಪ್ರಮುಖವಾದುದು.

ಇದೇ ಅ.5 ರಂದು ಸರಸ್ವತಿ ಪೂಜೆ ಮಾಡಲಾಗುತ್ತದೆ. ಅಂದು ಪುಸ್ತಕಗಳು, ಲೇಖನಿ ಸಾಮಗ್ರಿಗಳು ಹಾಗೂ ಕಲೆಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳು ಪೂಜಿಸಲ್ಪಡುತ್ತವೆ. ಈ ದಿನಗಳಲ್ಲಿ ಮನೆ ಮನೆಯಲ್ಲಿ, ಕಛೇರಿ, ಗೋದಾಮುಗಳಲ್ಲಿ, ವಾಹನ-ಕಾರ್ಯಾಗಾರಗಳಲ್ಲಿ, ಶಾಲಾ ಕಾಲೇಜುಗಳಲ್ಲಿಯೂ ಸರಸ್ವತಿ ಪೂಜೆಯನ್ನು ನೆರವೇರಿಸಲಾಗುತ್ತದೆ.

ವಿಶೇಷವಾಗಿ ಪುಸ್ತಕಗಳು, ಸಂಗೀತ ಉಪಕರಣಗಳು, ಮಾಹಿತಿ ಸಾಧನಗಳು, ಒಟ್ಟಾರೆ ವಿದ್ಯೆಗೆ ಪೂರಕವಾದ ಯಾವುದೇ ವಸ್ತುಗಳಿದ್ದರೂ ಸ್ವಚ್ಛಗೊಳಿಸಿ ಒಪ್ಪ ಓರಣಗೊಳಿಸಿ ಮನೆಯನ್ನು ಸಜ್ಜುಗೊಳಿಸಬೇಕು. ಇದಕ್ಕೆ ಕಂಪ್ಯೂಟರ್ ಲ್ಯಾಪ್ ಟಾಪ್‍ಗಳೂ ಹೊರತಲ್ಲ.

ಪೂಜೆ ಮುಗಿಯುವವರೆಗೂ ಪುಸ್ತಕಗಳನ್ನು ಮುಟ್ಟಬಾರದು ಪೂಜೆ ಮುಗಿಯುವವರೆಗೂ ಪುಸ್ತಕಗಳನ್ನು ಮುಟ್ಟಬಾರದು. ಸಾಮಾನ್ಯವಾಗಿ ನವರಾತ್ರಿಯ ಒಂಬತ್ತನೆಯ ದಿನದ ಸಂಜೆ ಅಥವಾ ರಾತ್ರಿಯ ಹೊತ್ತು ಸರಸ್ವತಿ ಪೂಜೆಯನ್ನು ನೆರವೇರಿಸಲಾಗುತ್ತದೆ.

ಸರಸ್ವತಿ ವಿಗ್ರಹ ಇರುವವರು ವಿಶೇಷವಾಗಿ ಹಳದಿ ಮತ್ತು ಬಿಳಿ ಹೂವುಗಳಿಂದ ಅಲಂಕರಿಸಿ ವಿಗ್ರಹ ಇಲ್ಲದೆ ಇರುವವರು ಪುಸ್ತಕ ಲೇಖನಿಗಳ ಮೇಲೆ ಸರಸ್ವತಿ ದೇವಿಯ ಭಾವಚಿತ್ರವಿಟ್ಟು ಪೂಜೆ ಸಲ್ಲಿಸುತ್ತಾರೆ. ಸರಸ್ವತಿ ಶ್ಲೋಕ ಪಠಿಸಿ ದೀಪವನ್ನು ಹಚ್ಚಿ ಅಗರಬತ್ತಿಗಳಿಂದ ವಾತಾವರಣವನ್ನು ಆಹ್ಲಾದಗೊಳಿಸಲಾಗುತ್ತದೆ.

ಇದರಿಂದ ಸರಸ್ವತಿ ದೇವಿ ನಿಮ್ಮ ಪೂಜಾ ಸ್ಥಳದಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಸರಸ್ವತಿ ಎಂದರೆ ವಿದ್ಯೆಯ ದೇವತೆ ಮಾತ್ರವಲ್ಲ, ಸ್ವಚ್ಛತೆಯ ಹರಿಕಾರಳೂ ಆಗಿದ್ದಾಳೆ. ಬಿಳಿಬಣ್ಣ ಸ್ವಚ್ಛತೆಯ ಸಂಕೇತವಾಗಿರುವ ಕಾರಣ ಪೂಜೆಯಲ್ಲಿ ಬಿಳಿಯ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಅಲಂಕಾರದಲ್ಲಿ ಬಿಳಿಯ ವಸ್ತುಗಳನ್ನೇ ಹೆಚ್ಚು ಬಳಸಿ. ವಿಶೇಷವಾಗಿ ನೈವೇದ್ಯಕ್ಕಾಗಿ ಬಿಳಿಯ ಬಣ್ಣದ ಖಾದ್ಯಗಳನ್ನೇ ತಯಾರಿಸಿ. ಉದಾಹರಣೆಗೆ ಅಕ್ಕಿಯ ಪಾಯಸ, ಹಾಲು, ಅವಲಕ್ಕಿಯ ಖಾದ್ಯ, ತಾಜಾ ತೆಂಗಿನ ತುರಿಯ ಖಾದ್ಯಗಳು ಇತ್ಯಾದಿಗಳನ್ನೇ ತಯಾರಿಸಿ ಪೂಜೆಯ ಸಮಯದಲ್ಲಿ ಅರ್ಪಿಸಿದರೆ ತಾಯಿ ಸಂಪನ್ನಳಾಗುತ್ತಾಳೆ.

ಸರಸ್ವತಿ ಪೂಜೆಯ ಸಂದರ್ಭವನ್ನು 10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ನೀಡುವ ಉಡುಗೊರೆಗೆ ಸರಸ್ವತಿ ಧನಂ ಎಂದು ಕರೆಯುತ್ತಾರೆ. ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ, ಬಳೆ, ಅಲಂಕಾರಿಕಾ ವಸ್ತುಗಳು, ವೀಳ್ಯದ ಎಲೆ, ಅಡಿಕೆ ಮತ್ತು ಬಾಳೆಹಣ್ಣುಗಳಿರುವ ಬುಟ್ಟಿಯನ್ನು ಉಡುಗೊರೆಯಾಗಿ ನೀಡಿ ಅವರನ್ನು ಕುಳ್ಳಿರಿಸಿ ಅರಿಶಿನ-ಕುಂಕುಮ ಹಚ್ಚಿ ಪೂಜೆ ಮಾಡಲಾಗುವುದು. ಇವೆಲ್ಲವೂ ಸರಸ್ವತಿಯ ಸಂಕೇತಗಳಾಗಿದ್ದು ಹೆಣ್ಣು ಮಕ್ಕಳಲ್ಲಿ ವಿವೇಕ ಮೂಡಲು ನೆರವಾಗುತ್ತದೆ ಎಂದು ಹಿರಿಯರು ನಂಬುತ್ತಾರೆ.

ವಿಜಯದಶಮಿಯ ಪೂಜೆ ಬಳಿಕವೇ ಈ ಎಲ್ಲ ವಸ್ತುಗಳನ್ನು ತೆಗೆದಿಡಬಹುದು. ಸರಸ್ವತಿಯ ಆರಾಧನೆ ಪುಸ್ತಕ ಜ್ಞಾನಕ್ಕಷ್ಟೆ ಮೀಸಲಲ್ಲ. ನಿಜವಾದ ಸರಸ್ವತಿಯ ಆರಾಧನೆ ಮಸ್ತಕದೊಳಗಿನ ವಿವೇಕದಲ್ಲಿದೆ. ಸುತ್ತಣ ಪ್ರಪಂಚದೊಡನೆ ವ್ಯವಹರಿಸುವ ರೀತಿಯಲ್ಲಿದೆ, ನಡಾವಳಿಯಲ್ಲಿದೆ. ನವರಾತ್ರಿಯ ಸರಸ್ವತಿಯ ಪೂಜೆ ಅಂತಹ ಬದಲಾವಣೆಗೊಂದು ಆರಂಭವಷ್ಟೆ.

ವೀಣಾಪಾಣಿ, ಪುಸ್ತಕಧಾರಿಣಿಯಾದ ಸರಸ್ವತಿ ಕಲೆ ಮತ್ತು ವಿದ್ಯೆಯ ಪ್ರತಿರೂಪ. ಆಕೆಯ ಆರಾಧನೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಪೂರಕವಾಗುತ್ತದೆ. ಒಟ್ಟಾರೆ ದೇವಿ ಸರಸ್ವತಿಗೆ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಮಾಡುವುದು ಹಿಂದೂಗಳ ಸಂಪ್ರದಾಯವಾಗಿದೆ.

Facebook Comments