ಸರವಣಗೆ ಶಿವಾಜಿನಗರದಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.3- ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಎಲ್ಲ ಮತದಾರರಿಂದ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿ ಗೆದ್ದು ಇತಿಹಾಸ ನಿರ್ಮಿಸಲಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಸರವಣ ಅವರು ವಿಶ್ವಾಸ ವ್ಯಕ್ತಪಡಿಸಿದರು.  ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಕ್ಷೇತ್ರದ ವಿವಿಧೆಡೆ ಬೈಕ್ ರ್ಯಾಲಿ, ರೋಡ್ ಶೋ ಸೇರಿದಂತೆ ಹಲವೆಡೆ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದ ಅವರು ಗೆಲುವಿನ ಹುಮ್ಮಸಿನಲ್ಲಿದ್ದಾರೆ.

ನಾನು ಯಾವುದೇ ಜಾತಿ ಅಥವಾ ಧರ್ಮಕ್ಕೆ ಅಂಟಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಪ್ರಚಾರ ನಡೆಸಿದ್ದೇನೆ. ಕ್ಷೇತ್ರದಲ್ಲಿರುವ ಮತದಾರರು ನಿರೀಕ್ಷೆಗೂ ಮೀರಿದ ಬೆಂಬಲ ಕೊಟ್ಟಿದ್ದಾರೆ. ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು. ಜನರು ನನ್ನನ್ನು ಮನೆ ಮಗನಂತೆ ನೋಡಿದ್ದಾರೆ. ನಾನು ಈ ಹಿಂದೆ ಪಾಲಿಕೆ ಸದಸ್ಯನಾಗಿದ್ದ ವೇಳೆ ಮಾಡಿರುವ ಕೆಲಸಗಳು ಜನರಿಗೆ ಗೊತ್ತಿದೆ. ಸರವಣ ಗೆದ್ದರೆ ಕ್ಷೇತ್ರದಲ್ಲಿ ಕೆಲಸಗಳು ಮಾಡುತ್ತಾರೆ ಎಂಬ ಅಭಿಪ್ರಾಯ ಮತದಾರರಿಂದ ವ್ಯಕ್ತವಾಗಿದೆ. ಹೀಗಾಗಿ ಬದಲಾವಣೆ ನಿಶ್ಚಿತ ಎಂದರು.

ಕ್ಷೇತ್ರದಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಕೆಲವು ಕಡೆ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ಅಗತ್ಯವಿದೆ. ನನ್ನ ಮೊದಲ ಆದ್ಯತೆ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿಕೊಡುವುದು, ಇನ್ನು ಕೆಲವು ಕಡೆ ಕುಡಿಯುವ ನೀರು, ರಸ್ತೆಗಳ ಅಗಲೀಕರಣ, ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಇವೆಲ್ಲವನ್ನೂ ಕಾಲಮಿತಿಯೊಳಗೆ ಪರಿಹರಿಸಿ ಕೊಡುವುದಾಗಿ ಮತದಾರರಿಗೆ ಭರವಸೆ ನೀಡಿದರು.

ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಂದ ವೇಳೆ ಐಎಂಎ ಪ್ರಕರಣದಲ್ಲಿ ವಂಚನೆಗೊಳಗಾಗದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದೇನೆ. ಇದಕ್ಕೆ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶಾಸಕನಾಗಿ ಗೆದ್ದರೆ ಪ್ರತಿಯೊಬ್ಬರ ಹಿತ ಕಾಪಾಡುತ್ತೇನೆ ಎಂದು ಶಪಥ ಮಾಡಿದರು.

Facebook Comments