ಸಾರ್ಸ್ ವೈರಸ್‍ಗೆ ಐದು ಬಲಿ, 200 ಜನರಿಗೆ ಮಾರಕ ಸೋಂಕು

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್,ಜ.20- ಮಾರಕ ಸಾರ್ಸ್ (ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಡ್ರೋನ್) ವೈರಾಣು ಸೋಂಕಿನಿಂದ ಚೀನಾದಲ್ಲಿ ಐದನೆ ವ್ಯಕ್ತಿ ಬಲಿಯಾಗಿದ್ದು , 200ಕ್ಕೂ ಹೆಚ್ಚು ಮಂದಿಗೆ ಈ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.  ಸೋಂಕು ರೋಗ ನಿಯಂತ್ರಣಕ್ಕೆ ಚೀನಾ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದರೂ ಹೊಸ ಹೊಸ ಪ್ರಕರಣಗಳು ಪತ್ತೆಯಾಗಿರುವುದು ಆಘಾತಕಾರಿಯಾಗಿದೆ.

ಈ ಮಧ್ಯೆ ಸಾರ್ಸ್ ಮತ್ತಷ್ಟು ವ್ಯಾಪಕವಾಗಿ ಹರಡುವುದನ್ನು ತಪ್ಪಿಸಲು ಅಗತ್ಯವಾದ ಎಲ್ಲಾ ನೆರವು ನೀಡುವುದಾಗಿ ವಿಶ್ವ ಆರೋಗ್ಯಸಂಸ್ಥೆ ಚೀನಾಗೆ ಭರವಸೆ ನೀಡಿದೆ. ಈ ವಾರದಲ್ಲಿ ಲೂನಾರ್ ವರ್ಷಾಚರಣೆಗೆ ಚೀನಾ ಸಿದ್ಧತೆಯಲ್ಲಿರುವಾಗಲೇ ಈ ಮಾರಕ ಸೋಂಕು ರೋಗ ಕಾಣಿಸಿಕೊಂಡಿರುವುದು ಮತ್ತಷ್ಟು ಭಯ ಭೀತಿಯ ವಾತಾವರಣಕ್ಕೆ ಕಾರಣವಾಗಿದೆ.

ವರ್ಷಾಚರಣೆ ಸಂದರ್ಭದಲ್ಲಿ ಲಕ್ಷಾಂತರ ಜನರು ತಮ್ಮ ತಮ್ಮ ಪ್ರದೇಶಗಳಿಗೆ ವಲಸೆ ಹೋಗುವುದರಿಂದ ಈ ಸೋಂಕು ರೋಗ ಮತ್ತಷ್ಟು ಹಬ್ಬುವ ಆತಂಕವೂ ಎದುರಾಗಿದೆ.
ರೋಗ ಹರಡದಂತೆ ತಡೆಗಟ್ಟಲು ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ಚೀನಾದಲ್ಲಿ ಕಂಡು ಬಂದಿರುವ ಉಸಿರಾಟ ಸೋಂಕಿನ ಈ ಮಾರಕ ರೋಗ ಏಷ್ಯಾದ ಇತರ ಖಂಡಗಳಿಗೂ ಹಬ್ಬದಂತೆ ತಡೆಗಟ್ಟಲು ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ.
ಚೀನಾ ಮತ್ತು ಹಾಂಕಾಂಗ್‍ನಲ್ಲಿ 2002 ಮತ್ತು 2003ರಲ್ಲಿ ಸಾರ್ಸ್ ವೈರಾಣು ಸೋಂಕಿನಿಂದ 650ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

Facebook Comments