ರಾಜ್ಯಪಾಲರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದು ಸರಿಯಲ್ಲ: ಸತೀಶ್ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.21- ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ತಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ಸೌಜನ್ಯದ ಭೇಟಿ, ಬೆಳಗಾವಿ ಉಪ ಚುನಾವಣೆಯ ಮಾಹಿತಿ ಕೇಳಿದರು. ನಾನು ವಿವರ ನೀಡಿದ್ದೇನೆ ಎಂದರು.

ಬಿಜೆಪಿ ಸರ್ಕಾರದಲ್ಲಿ ಮೊದಲಿನಿಂದಲೂ ನಾನಾ ರೀತಿಯ ಗೊಂದಲಗಳಿವೆ. ಲಾಕ್‍ಡೌನ್ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಸಚಿವರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈಗ ರಾಜ್ಯಪಾಲರ ಪ್ರವೇಶವಾಗಿದೆ ಎಂದು ಹೇಳಿದರು.

ಈ ಸರ್ಕಾರದಲ್ಲಿ ಸಂಘಟಿತ ನಿರ್ಧಾರಗಳು ಆಗುತ್ತಿಲ್ಲ. ತಜ್ಞರ ಸಲಹೆ ಪಡೆದು ಪರಿಸ್ಥಿತಿ ನಿಭಾಯಿಸಬೇಕಿತ್ತು. ಆದರೆ, ಅದನ್ನು ಮಾಡದೆ ಮನಸೋಯಿಚ್ಚೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರು ಸರ್ವಪಕ್ಷಗಳ ಸಭೆಯ ನೇತೃತ್ವ ವಹಿಸುವ ಬದಲಾಗಿ ಸರ್ಕಾರಕ್ಕೆ ಸಲಹೆ ನೀಡಬಹುದಿತ್ತು. ಆದರೆ, ನೇರವಾಗಿ ಅವರೇ ಸಭೆಯಲ್ಲಿ ಭಾಗವಹಿಸಿದ್ದು ಸರಿಯಲ್ಲ ಎಂದರು.

ಕೋವಿಡ್ ನಿಯಂತ್ರಣವಾಗುವವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವುದು ಸೂಕ್ತ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು.

Facebook Comments