ಸಿದ್ದರಾಮಯ್ಯನವರಿಗೂ ಬೆಳಗಾವಿ ಕಾಂಗ್ರೆಸ್ ಸಮಸ್ಯೆಗೂ ಸಂಬಂಧವಿಲ್ಲ : ಸತೀಶ್ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

Satish-Jarakihole
ಬೆಳಗಾವಿ, ಸೆ.15- ಸಿದ್ದರಾಮಯ್ಯನವರಿಗೂ ಬೆಳಗಾವಿ ಕಾಂಗ್ರೆಸ್ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ಸಿದ್ದರಾಮಯ್ಯನವರ ಜತೆಗೆ ನಾನು ಈ ಬಗ್ಗೆ ಮಾತುಕತೆ ನಡೆಸುವುದಿಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ಹೇಳಿದರು.

ಬೆಳಗಾವಿಯಲ್ಲಿ ನಡೆದ ಕೆಎಲ್‍ಎಸ್ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲಿದೆ. ಬೆಳಗಾವಿ ಜಿಲ್ಲೆ ರಾಜಕೀಯದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು. ನಾನು ಮೊದಲಿನಿಂದಲೂ ಕಾಂಗ್ರೆಸ್ ಪರವಾಗಿದ್ದೇನೆ. ಆಪರೇಷನ್ ಕಮಲದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಂದು ನಡೆದ ಕೆಎಲ್‍ಎಸ್ ಅಮೃತ ಮಹೋತ್ಸವದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಜತೆಯಾಗಿಯೇ ಕುಳಿತುಕೊಂಡು ಚರ್ಚೆ ನಡೆಸುತ್ತಿದ್ದುದು ಕೂಡ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಕಳೆದ ಒಂದು ವಾರದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವೆ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಂಬಂಧ ಉಂಟಾದ ಭಿನ್ನಮತ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಸಮ್ಮಿಶ್ರ ಸರ್ಕಾರಕ್ಕೆ ಸಂಚಕಾರ ತರುವ ಮಟ್ಟ ತಲುಪಿತ್ತು. ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ, ದಕ್ಷಿಣದಂತಾಗಿದ್ದರು.

ಇಂದು ನಡೆದ ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಅಕ್ಕಪಕ್ಕ ಕುಳಿತು ಮಾತನಾಡುತ್ತಿದ್ದುದು ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಶಾಶ್ವತ ಮಿತ್ರರೂ ಅಲ್ಲ ಎಂಬುದನ್ನು ಸಾಬೀತುಪಡಿಸುವಂತಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin