ಬೆಳಗಾವಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.11- ಇತ್ತ ಬಿಜೆಪಿ ಮುಖಂಡರಾದ ರಾಜು ಕಾಗೆ, ಅಶೋಕ್ ಪೂಜಾರಿಯವರನ್ನು ಕಾಂಗ್ರೆಸ್‍ಗೆ ಕರೆ ತರುವ ಯತ್ನ ನಡೆಯುತ್ತಿದ್ದರೆ; ಅತ್ತ ಬೆಳಗಾವಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಜಾರಕಿಹೊಳಿ ಕುಟುಂಬದವರಲ್ಲದೆ ಬೇರೆಯವರಿಗೆ ಮಣೆ ಹಾಕುತ್ತಿರುವ ಕಾಂಗ್ರೆಸ್ ಧೋರಣೆ ವಿರೋಧಿಸಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ನಿನ್ನೆ ನಡೆದ ಕಾಂಗ್ರೆಸ್ ಮುಖಂಡರ ಸಭೆಗೆ ಗೈರಾಗಿದ್ದಲ್ಲದೇ ಇಂದಿನ ಸಭೆಯಿಂದಲೂ ಕೂಡ ಹೊರಗುಳಿದಿದ್ದಾರೆ.

ಗೋಕಾಕ್ ಕ್ಷೇತ್ರದಲ್ಲಿ ತಮ್ಮ ಸಹೋದರ ಲಖನ್ ಜಾರಕಿಹೊಳಿಯವರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿತ್ತು. ಅದರಂತೆ ಲಖನ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಕಳೆದ ಎರಡು ತಿಂಗಳಿನಿಂದಲೂ ಕ್ಷೇತ್ರದಾದ್ಯಂತ ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಿಂದ ಸಂಭಾವ್ಯ ಅಭ್ಯರ್ಥಿಯಾಗಿರುವ ರಮೇಶ್ ಜಾರಕಿಹೊಳಿ ವಿರುದ್ಧ ನಿರಂತರ ಹರಿಹಾಯುತ್ತ ಈಗಾಗಲೇ ಲಖನ್ ಜೊತೆ ಸತೀಶ್ ಪ್ರಚಾರ ಕೂಡ ನಡೆಸಿದ್ದಾರೆ.

ಆದರೆ ನಿನ್ನೆ ಕೆಪಿಸಿಸಿಯಲ್ಲಿ ನಡೆದ ಸಭೆಯಲ್ಲಿ ಜಾರಕಿಹೊಳಿ ಕುಟುಂಬದವರಲ್ಲದ ಬೇರೆಯವರಿಗೆ ಅಂದರೆ ಗೋಕಾಕ್‍ನಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ್ ಪೂಜಾರಿಯವರನ್ನು ಕಾಂಗ್ರೆಸ್‍ನಿಂದ ಕಣಕ್ಕಿಳಿಸುವ ಬಗ್ಗೆ ನಡೆದಿರುವ ಚರ್ಚೆ ಸತೀಶ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ನಿನ್ನೆ ಕಾಗವಾಡ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ರಾಜುಕಾಗೆ ಮತ್ತು ಅಶೋಕ್ ಪೂಜಾರಿಯವರು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಕಾಂಗ್ರೆಸ್ ಶಾಸಕರಾಗಿದ್ದ ರಮೇಶ್ ಜಾರಕಿಹೊಳಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಮತ್ತು ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದ ಅಶೋಕ್ ಪೂಜಾರಿಯವರನ್ನು ಕಣಕ್ಕಿಳಿಸಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಕಾರ್ಯತಂತ್ರವನ್ನು ಕಾಂಗ್ರೆಸ್ ರೂಪಿಸುತ್ತಿದೆ.

ಇದು ಸತೀಶ್ ಜಾರಕಿಹೊಳಿಯವರಿಗೆ ತೀವ್ರ ಇರಿಸು-ಮುರಿಸಾಗಿದೆ. ಅಶೋಕ್ ಪೂಜಾರಿ ಹಾಗೂ ರಾಜು ಕಾಗೆಯವರು ಪಕ್ಷಕ್ಕೆ ಸೇರ್ಪಡೆಯ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಚರ್ಚೆಯಾಗಿರಬಹುದು. ಆದರೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿಲ್ಲ. ಲಖನ್ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸಿದ್ದರಾಮಯ್ಯನವರು ಕೂಡ ನಿನ್ನೆ ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ ಎಂದು ಪರೋಕ್ಷವಾಗಿಯೇ ಕಾಗೆ, ಪೂಜಾರಿಯವರ ಪಕ್ಷ ಸೇರ್ಪಡೆಗೆ ಆಹ್ವಾನಿಸಿದ್ದಾರೆ. ಈ ಬೆಳವಣಿಗೆಗಳು ಬೆಳಗಾವಿ ಕಾಂಗ್ರೆಸ್ ವಲಯದಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ.

ರಮೇಶ್ ಮತ್ತು ಸತೀಶ್ ಸಹೋದರರು ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದರು. ವೈಯಕ್ತಿಕ ಟೀಕೆಗಳನ್ನು ಮಾಡಿದ್ದರು. ಈಗ ಬೇರೆಯವರಿಗೆ ಈ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಇಲ್ಲಿನ ರಾಜಕೀಯ ಬೆಳವಣಿಗೆಗಳು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

Facebook Comments