ಲಖನ್ ಜೊತೆಗೆ ನಾಮಪತ್ರ ಸಲ್ಲಿಸಿದ ಸತೀಶ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.18- ನಾಮಪತ್ರ ಸಲ್ಲಿಕೆ ವೇಳೆ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಿದ ಘಟನೆ ನಡೆದಿದೆ. ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡುವ ಐದು ಮಂದಿಯ ಪೈಕಿ ಒಬ್ಬ ನಾಯಕರ ಮತದಾರರ ಗುರುತಿನ ಚೀಟಿ ಇರಲಿಲ್ಲ.

ಹೀಗಾಗಿ ಚುನಾವಣಾಧಿಕಾರಿಗಳು ನಾಮಪತ್ರದ ದೋಷದ ಬಗ್ಗೆ ಎಚ್ಚರಿಕೆ ನೀಡಿದ್ದರು. ಕೂಡಲೇ ಸೂಚಕರ ಮತದಾರರ ಗುರುತಿನ ಚೀಟಿಯನ್ನು ತಂದು ನಾಮಪತ್ರ ಸಲ್ಲಿಸಲಾಯಿತು. ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಇಂದು ಕಾಂಗ್ರೆಸ್ ನಾಯಕರು ಅತಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು, ಯಮಕನಮರಡಿಯ ಹಾಲಿ ಶಾಸಕ ಸತೀಶ್ ಜಾರಕಿಹೊಳಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ.

ಒಂದು ವೇಳೆ ಲಖನ್ ಅವರ ನಾಮಪತ್ರ ತಿರಸ್ಕಾರವಾದರೆ ಸತೀಶ್ ಜಾರಕಿಹೊಳಿ ಅವರೇ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಿರುದ್ಧ ಕಣಕ್ಕಿಳಿಯುವ ಉದ್ದೇಶದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಇತ್ತ ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಕೆ.ಗೋಪಾಲಯ್ಯ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಗೋಪಾಲಯ್ಯ ಅವರ ಪತಿ ಹೇಮಾವತಿ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ತಾಂತ್ರಿಕ ಕಾರಣಗಳಿಂದ ಗೋಪಾಲಯ್ಯ ಅವರ ನಾಮಪತ್ರ ತಿರಸ್ಕಾರಗೊಂಡರೆ ಹೇಮಾವತಿ ಅವರನ್ನು ಕಣಕ್ಕಿಳಿಸಲು ಈ ತಂತ್ರಗಾರಿಕೆ ರೂಪಿಸಲಾಗಿದೆ.

Facebook Comments