12 ಜನ ಶಾಸಕರ ಜೊತೆ ‘ಕೈ’ಕೊಟ್ಟು ಬಿಜೆಪಿ ಸೇರುತ್ತೇವೆ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Jarakihole

ಬೆಂಗಳೂರು, ಸೆ.2- ಬೆಳಗಾವಿ ಜಿಲ್ಲಾ ಕಾಂಗ್ರೆಸ್‍ನ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ. ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ನಡೆಯುತ್ತಿದ್ದ ಶೀತಲ ಸಮರ ಬಹಿರಂಗಗೊಂಡು ಹೈಕಮಾಂಡ್‍ಗೆ ಎಚ್ಚರಿಕೆ ನೀಡುವ ಹಂತಕ್ಕೆ ತಲುಪಿದೆ. ಬೆಳಗಾವಿ ವಿಚಾರಕ್ಕೆ ತಲೆ ಹಾಕಿದರೆ ನಾವು 12 ಜನ ಶಾಸಕರೊಂದಿಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಬೇಕಾಗುತ್ತದ ಎಂಬ ಎಚ್ಚರಿಕೆಯ ಸಂದೇಶವನ್ನು ರಮೇಶ್ ಜಾರಕಿಹೊಳಿ ನೀಡಿದ್ದಾರೆ ಎಂಬ ಅಂಶ ಹೊರಬಿದ್ದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಜಾರಕಿಹೊಳಿ ಸಹೋದರರು ಈ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಶಾಸಕರು, ಕಾಂಗ್ರೆಸ್ ಮುಖಂಡರಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಬ್ರದರ್ಸ್ ನಡುವೆ ಭಿನ್ನಮತ ಭುಗಿಲೆದ್ದಿತ್ತು. ಪಿಎಲ್‍ಡಿ ಬ್ಯಾಂಕ್ ಚುನಾವಣೆ ಸಂಬಂಧ ಉಂಟಾದ ಈ ಅಸಮಾಧಾನ ಪಕ್ಷದ ಹೈಕಮಾಂಡ್ ಬಾಗಿಲವರೆಗೆ ಬಂದು ನಿಂತಿತ್ತು. ರಾಜಿ-ಸಂಧಾನಕ್ಕಾಗಿ ಕೆ.ಸಿ.ವೇಣುಗೋಪಾಲ್ ಅವರು ನಿನ್ನೆ ಕರೆದಿದ್ದ ಸಭೆಯಲ್ಲಿ ಜಾರಕಿಹೊಳಿ ಸಹೋದರರಿಗೆ ಬುದ್ಧಿ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆಗಳು ಆಗುವುದು ಬೇಡ. ಹೊಂದಿಕೊಂಡು ಹೋಗಿ. ನಮಗೆ ಪಕ್ಷ ಮುಖ್ಯ ಎಂದು ಸಲಹೆ ಮಾಡಿದ್ದಾರೆ.

ನೀವು ಹೆಬ್ಬಾಳ್ಕರ್ ಪರವಾಗಿ ಮಾತನಾಡುತ್ತೀರಿ. ಬೆಳಗಾವಿ ರಾಜಕೀಯಕ್ಕೆ ತಲೆ ಹಾಕಬೇಡಿ. ಇದೇ ಧೋರಣೆ ಮುಂದುವರಿದರೆ ನಾವು ಪರ್ಯಾಯ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ರವಾನಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಗಲಿಬಿಲಿಗೊಂಡ ವೇಣುಗೋಪಾಲ್ ಅವರು ಸಭೆಯನ್ನು ಮೊಟಕುಗೊಳಿಸಿ ಬೆಳಗಾವಿಯ ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಹುಲ್‍ಗಾಂಧಿ ಅವರಿಗೆ ವಿವರಣೆ ನೀಡಿದ್ದು, ರಾಹುಲ್ ಅವರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಬೆಳಗಾವಿಯ ಭಿನ್ನಮತ ಶಮನ ಮಾಡುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಬೆಳಗ್ಗೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಅಲ್ಲದೆ, ಬೆಳಗಾವಿಯಲ್ಲಿ ಪಕ್ಷ ಸಂಘಟನೆಗೆ ಧಕ್ಕೆಯಾದರೆ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಹಿಂಜರಿಯುವುದಿಲ್ಲ ಎಂದು ಕೂಡ ಹೇಳಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಅವರೊಂದಿಗೆ ಸಿದ್ದರಾಮಯ್ಯನವರು ಕೂಡ ಮಾತನಾಡಿ ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ಶಮನಗೊಳಿಸಿದ್ದಾರೆ. ಸದಾ ಉತ್ತರ, ದಕ್ಷಿಣದಂತಿರುತ್ತಿದ್ದ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರಣಕ್ಕೆ ಈಗ ಒಂದಾಗಿ ಬೆಳಗಾವಿ ಕಾಂಗ್ರೆಸ್ ಹಿಡಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ತಾಪಂ, ಜಿಪಂ, ಪಿಎಲ್‍ಡಿ ಬ್ಯಾಂಕ್ ಚುನಾವಣೆ ಸೇರಿ ಪ್ರತಿ ಹಂತದಲ್ಲೂ ನನ್ನ ಕ್ಷೇತ್ರದ ಆಡಳಿತದಲ್ಲಿ ಈ ಸಹೋದರರು ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಮಗೆ ಕಿರಿಕಿರಿಯಾಗುತ್ತಿದೆ. ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗೆಹರಿಸಬೇಕೆಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ವೇಣುಗೋಪಾಲ್ ಅವರಿಗೆ ದೂರು ನೀಡಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತದೋ ಕಾದು ನೋಡಬೇಕು.

Facebook Comments

Sri Raghav

Admin