ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ವಿರುದ್ಧ ಹುಳಿಮಾವು ಕೆರೆ ಸಂತ್ರಸ್ತರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.27- ಹುಳಿಮಾವು ಕೆರೆ ಕೋಡಿ ಒಡೆದು ಪ್ರವಾಹ ಸೃಷ್ಟಿಯಾಗಿ ಸಾವಿರಾರು ಮಂದಿ ಬೀದಿಗೆ ಬಿದ್ದು ಇಂದಿಗೆ ನಾಲ್ಕನೆ ದಿನಕ್ಕೆ ಕಾಲಿಟ್ಟಿದ್ದರೂ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೊಳಗಾಗಿದ್ದರೂ ಈತನಕ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಇನ್ನೂ ಸ್ಥಳಕ್ಕೆ ಬಂದಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಕಾಳಜಿ ಕೇಂದ್ರದಲ್ಲಿ ನೂರಾರು ಮಂದಿ ಇದ್ದಾರೆ. ಪಠ್ಯಪುಸ್ತಕಗಳು ಹಾಳಾಗಿದ್ದು, ಮಕ್ಕಳು ಶಾಲೆಗೆ ಹೋಗಲಾಗತ್ತಿಲ್ಲ. ಸಮವಸ್ತ್ರ, ಬಟ್ಟೆ ಊಟವಿಲ್ಲದೆ ಮಕ್ಕಳು ಹಸಿವಿನಿಂದ ಇದ್ದಾರೆ ಎಂದು ಪೋಷಕರು ಅಲವತ್ತುಕೊಂಡಿದ್ದಾರೆ. ಪ್ರತಿ ಚುನಾವಣೆಯಲ್ಲೂ ಶಾಸಕ ಸತೀಶ್ ರೆಡ್ಡಿ ಬಂದು ನಿಮ್ಮ ಸಮಸ್ಯೆ ಬಗೆಹರಿಸ್ತೀನಿ ಎನ್ನುತ್ತಿದ್ರು. ಈಗ ನಾವು ಸಂಕಷ್ಟದಲ್ಲಿದ್ದೇವೆ. ಇಂದಲ್ಲ ನಾಳೆ ಅವರು ಬರ್ತಾರೆ, ಸಮಸ್ಯೆ ಕೇಳ್ತಾರೆ ಅಂದುಕೊಂಡಿದ್ವಿ,  ಈತನಕ ಬಂದಿಲ್ಲ ಎಂದು  ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರು ಡೇಂಘಿ ಜ್ವರದಿಂದ ಬಳಲುತ್ತಿದ್ದಾರೆ. ಹಾಗಾಗಿ ಒಂದೆರಡು ದಿನದಲ್ಲಿ ಬರ್ತಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಸತೀಶ್ ರೆಡ್ಡಿ ಕುಟುಂಬ ಸಮೇತರಾಗಿ ವಿದೇಶಿ ಪ್ರವಾಸದಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅವರು ಪ್ರವಾಸಕ್ಕೆ ಹೋಗಲಿ ನಾವು ಬೇಡ ಎನ್ನುವುದಿಲ್ಲ. ಆದರೆ, ನಾವು ಈಗ ಹೀನಾಯ ಸ್ಥಿತಿಯಲ್ಲಿದ್ದೇವೆ.

ನಮ್ಮ ಸಮಸ್ಯೆ ಗೊತ್ತಾಗಿ ತಕ್ಷಣ ಅವರು ಬರುತ್ತಾರೆ ಅಂದುಕೊಂಡಿದ್ದೆವು. ಆದರೆ, ಅವರು ಬರಲೇ ಇಲ್ಲ ಎಂದು ತೀವ್ರ ಬೇಸರ ತೋಡಿಕೊಂಡರು.ಚುನಾವಣೆ ಸಮಯದಲ್ಲಿ ಮತ ಕೇಳಲು ಬರುತ್ತಾರೆ. ಈಗ ನಾವು ಸಂಕಷ್ಟದಲ್ಲಿರುವಾಗ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಕೆರೆ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಶಾಸಕರು ಬೇರೊಂದು ಕೆರೆಗೆ ಅದಲು-ಬದಲು ಮಾಡಿದ್ದಾರೆ. ಹಾಗೆ ಮಾಡಿದ್ದರಿಂದಲೇ ಈಗ ಅನಾಹುತ ಸಂಭವಿಸಲು ಕಾರಣ ಎಂಬ ಅನುಮಾನ ಕೂಡ ಕಾಡುತ್ತಿದೆ. ಅವರು ಸರಿಯಾಗಿದ್ದಿದ್ದರೆ ಏಕೆ ಈವರೆಗೆ ಇಲ್ಲಿಗೆ ಬರಲಿಲ್ಲ  ಎಂದು ಬಹಳಷ್ಟು ಮಂದಿ ಕಿಡಿ ಕಾರಿದರು.

ನಿನ್ನೆ ಇಲ್ಲಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದರು. ಆಗ ಸಂಜೆಯೊಳಗೆ ಪ್ರತಿ ಕುಟುಂಬಕ್ಕೆ 50 ಸಾವಿರ ರೂ.ಪರಿಹಾರ ಕೊಡುವುದಾಗಿ ಹೇಳಿ ಹೋದರು. ಈಗ ಮಧ್ಯಾಹ್ನವಾಗಿದೆ. ಈತನಕ ಒಂದು ರೂ. ಬಂದಿಲ್ಲ ಎಂದು ಸಂತ್ರಸ್ತರು ತೀವ್ರ ಬೇಸರ ವ್ಯಕ್ತಪಡಿಸಿದರು.

Facebook Comments